ಸುದ್ಧಿಕನ್ನಡ ವಾರ್ತೆ
ಪಣಜಿ: ಬೆಳಗಾವಿಯ ಮಿಲಿಟರಿ ಕ್ಯಾಂಪ್ ಪರಿಸರದಲ್ಲಿ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಗೋವಾ ನಿವಾಸಿ ಮಂದಾರ ಮಾಂಜರೇಕರ್ ಎಂಬ ವ್ಯಕ್ತಿಯ ಮೇಲೆ ಸ್ಥಳೀಯರ ಗುಂಪೊಂದು ಹಲ್ಲೆ ನಡೆಸಿದೆ ಎನ್ನಲಾಗಿದ್ದು, ಹಲ್ಲೆಗೊಳಗಾದ ಗೋವಾ ವ್ಯಕ್ತಿ ಗಾಯಗೊಂಡಿದ್ದಾರೆ.
ಗೋವಾ ಸುದ್ಧಿ ಮಾಧ್ಯಮಕ್ಕೆ ಗೋವಾ ನಿವಾಸಿ ಮಂದಾರ್ ನೀಡಿರುವ ಮಾಹಿತಿಯ ಅನುಸಾರ- ಗೋವಾದಿಂದ ಬೆಳಗಾವಿಗೆ ತೆರಳಿದ್ದ ಮಂದಾರ ಎಂಬ ವ್ಯಕ್ತಿಯು ಬೆಳಗಾವಿಯ ಮಿಲಿಟರಿ ಕ್ಯಾಂಪ್ ಬಳಿ ತನ್ನ ಕಾರನ್ನು ಪಾರ್ಕ ಮಾಡಿದ್ದರು. ಪಾರ್ಕ ಮಾಡುವಾಗ ಅಲ್ಲಿದ್ದ ಕೆಲವು ಬೈಕ್ ಗಳನ್ನು ಬದಿಗೆ ಸರಿಸಿ ತನ್ನ ಕಾರನ್ನು ಪಾರ್ಕ ಮಾಡಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಬಂದ ಮಹಿಳೆಯೋರ್ವಳು ಮಂದಾರ ರವರ ಕಾರಿಗೆ ಅಡ್ಡವಾಗಿ ಬಂದು ನಿಂತರು ಎನ್ನಲಾಗಿದೆ, ಆಕೆಯ ಪತಿ ಅಲ್ಲಿಗೆ ಬಂದು ಈ ರಸ್ತೆ ನಮ್ಮದು ನೀನು ಯಾರು..? ಎಂಬ ಪ್ರಶ್ನೆಯನ್ನು ಕೇಳಿದ ಎನ್ನಲಾಗಿದೆ.
ಅಷ್ಟರಲ್ಲೇ ಮಂದಾರ ಮತ್ತು ಅಲ್ಲಿನ ಸ್ಥಳೀಯರ ನಡುವೆ ಜಗಳ ಆರಂಭವಾಯಿತು ಎನ್ನಲಾಗಿದೆ. ತಮ್ಮ ಬೈಕ್ ಬದಿಗೆ ಸರಿಸಿ ನೀನು ಕಾರನ್ನು ಹೇಗೆ ಪಾರ್ಕ ಮಡಿದೆ ಎಂದು ಪ್ರಶ್ನಿಸುತ್ತ ಈತನ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ. ಮಂದಾರ ರವರಿಗೆ ಹಲ್ಲೆಯಿಂದಾಗಿ ಸಣ್ಣಪುಟ್ಟ ಗಾಯಗಳಾಗಿದೆ ಎನ್ನಲಾಗಿದೆ.
ಈ ಹಲ್ಲೆಯ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಬೆಳಗಾವಿ ಸ್ಥಳೀಯರು ಕೆಲವರು ಬಂದು ಮಂದಾರ ರವರ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಪ್ಪಿಸಿದರು. ಇಷ್ಟೇ ಅಲ್ಲದೆಯೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಂದಾರ ರವರು ಸ್ಥಳೀಯ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.