ಸುದ್ಧಿಕನ್ನಡ ವಾರ್ತೆ
ಮಳೆಗಾಲ ಬಂತೆಂದರೆ ಜಲಪಾತಗಳೆಲ್ಲ ಮೈದುಂಬಿಕೊಳ್ಳುತ್ತವೆ, ಕರ್ನಾಟಕ-ಗೋವಾ (Karnataka-Goa) ಗಡಿ ಭಾಗದಲ್ಲಿರುವ ಸುಂದರ ಹಾಗೂ ಅತ್ಯಾಕರ್ಷಣೀಯ ಈ ಜಲಪಾತ (Waterfall) ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹೌದು ಕರ್ನಾಟಕ-ಗೋವಾ ಗಡಿ ಭಾಗದಲ್ಲಿರುವ ಚಿಕಲೆ ಗ್ರಾಮದಲ್ಲಿರುವ ಈ ಜಲಪಾತ ಹಚ್ಚ ಹಸಿರಿನ ನಡುವೆ ಅತ್ಯಾಕರ್ಷಣೀಯವಾಗಿ ಕಂಗೊಳಿಸುತ್ತಿದೆ.
ಚಿಕಲೆ ಜಲಪಾತವು (Chikale Falls) ಬೆಳಗಾವಿಯಿಂದ 40 ಕಿಮಿ ದೂರದಲ್ಲಿದ್ದು ಗೋವಾ ಕರ್ನಾಟಕ ಗಡಿ ಭಾಗದಲ್ಲಿದೆ. ಈ ಜಲಪಾತ ಬಳಿಯಲ್ಲಿ ಒಂದು ಜಮೀನಿದೆ, ಅಲ್ಲಿ ನೀವು ಒಂದು ಕಾಲನ್ನು ಗೋವಾದಲ್ಲಿ ಮತ್ತೊಂದು ಕಾಲನ್ನು ಕರ್ನಾಟಕದಲ್ಲಿಡಬಹುದು. ಒಂದುದಿನದ ಪಿಕ್ನಿಕ್ ಡೆಸ್ಟೆನೇಶನ್ ಎಂಬುದಾಗಿ ಈ ಜಲಪಾತ ಸ್ಥಳೀಯವಾಗಿ ಪ್ರಸಿದ್ಧಿ ಪಡೆದಿದೆ. ಬಿಳಿಯ ಹಾಲಿನ ನೊರೆಯಂತೆ ಈ ಜಲಪಾತದ ನೀರು ಧುಮ್ಮಿಕ್ಕುತ್ತದೆ.
ನಿಸರ್ಗ ಸೌಂದರ್ಯ ಸವಿಯವವರು, ಟ್ರ್ಯಾಕಿಂಗ್ ಮಾಡುವಂತವರು ಈ ಜಲಪಾತ ವೀಕ್ಷಣೆಗೆ ಅಗತ್ಯವಾಗಿ ಭೇಟಿ ನೀಡಲೇಬೇಕು. ಈ ಜಲಪಾತಕ್ಕೆ ತೆರಳುವಾಗ ಕುಡಿಯಲು ನೀರು ಮತ್ತು ಅಗತ್ಯ ತಿಂಡಿ ತಿನಿಸುಗಳನ್ನು ತೆಗೆದುಕೊಂಡುಹೋಗಿ.
ಚಿಕಲೆ ಜಲಪಾತಕ್ಕೆ ತೆರಳಬೇಕಾದರೆ ಗೋವಾದಿಂದ ಚೋರ್ಲಾ ಘಾಟ್ ( Chorla Ghat) ಮಾರ್ಗವಾಗಿ ತೆರಳಬಹುದು. ಚೋರ್ಲಾ ಮಾರ್ಗವಾಗಿ ಕಣಕುಂಬಿ ನಂತರ ಜಾಂಬೋಟಿಗೆ ಸಾಗುವ ಮಾರ್ಗದಲ್ಲಿ ಚಿಕಲೆ ಊರಿನ ಸೈನ್ ಬೋರ್ಡನಿಂದ ಬಲಭಾಗಕ್ಕೆ ತಿರುಗಿ ಮುಂದೆ 3 ಕಿಮಿ ವಾಹನದಲ್ಲಿಯೇ ತೆರಳಬೇಕು. ನಂತರ 500 ಮೀಟರ್ ಕಾಲ್ನಡಿಗೆಯಲ್ಲಿ ಸಾಗಿದರೆ ಚಿಕಲೆ ಜಲಪಾತದ ಬಳಿ ತಲುಪಬಹುದಾಗಿದೆ.
ಹೆಚ್ಚಿನ ಥ್ರಿಲ್ ಬೇಕಾದವರಿಗೆ ಪಾರವಾಡಾ ಭಾಗದಿಂದ ಟ್ರ್ಯಾಕಿಂಗ್ (Tracking) ಮಾರ್ಗದಿಂದಲೂ ಸಾಗಬಹುದಾಗಿದೆ. ಈ ಊರು ಕರ್ನಾಟಕದ ಅರಣ್ಯ ಕ್ಷೇತ್ರದಲ್ಲಿ ಬರುತ್ತದೆ. 1879 ನೇ ಸಾಲಿನಲ್ಲಿ ಇಲ್ಲಿ ಹಾಕಿರುವ ಅರಣ್ಯ ಇಲಾಖೆಯ ನಾಮಫಲಕವನ್ನೂ ಕಾಣಬಹುದಾಗಿದೆ.
ಈ ಜಲಪಾತ ವೀಕ್ಷಣೆಗೆ ಖಂಡಿತವಾಗಿಯೂ ಒಮ್ಮೆಯಾದರೂ ಭೇಟಿ ನೀಡಲೇಬೇಕು, ಅಷ್ಟು ಸುಂದರ ತಾಣ ಇದಾಗಿದೆ.
ಎಚ್ಚರಿಕೆ: ಮಳೆಗಾಲದ ಸಂದರ್ಭದಲ್ಲಿ ಜಲಪಾತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೆಳೆತವಿರುತ್ತದೆ. ಯಾರೂ ಕೂಡ ಮೈಮರೆತು ನೀರಲ್ಲಿ ಧುಮುಕಿದರೆ ಜೀವಕ್ಕೆ ಹಾನಿಯುಂಟಾಗಬಹುದು.