ಸುದ್ದಿಕನ್ನಡ ವಾರ್ತೆ
Goa/Karnataka: ಗೋವಾ ರಾಜ್ಯಕ್ಕೆ ಕಳೆದ ಅನೇಕ ವರ್ಷಗಳ ಹಿಂದೆ ಬದುಕು ಕಟ್ಟಿಕೊಳ್ಳಲು ಬಂದ ಕನ್ನಡಿಗರ ಮಕ್ಕಳು ಕರ್ನಾಟಕಕ್ಕೆ ವಾಪಸ್ಸಾದರೆ ಇಂದು ಮೀಸಲಾತಿ (Reservation) ಲಭಿಸದೆಯೇ ವಿದ್ಯಾಭ್ಯಾಸದಿಂದ ಹಾಗೂ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಇದು ಗಂಭೀರ ಸಮಸ್ಯೆಯಾಗಿದ್ದು ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಗೋವಾ ಸರ್ಕಾರದೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಅನಿವಾರ್ಯತೆ ಇದೆ.

ಗೋವಾ ರಾಜ್ಯದಲ್ಲಿ ಕರ್ನಾಟಕದ ಲಕ್ಷಾಂತರ ಜನರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಗೋವಾದ ಶಾಲೆಗಳಲ್ಲಿ ವರ್ಗಾವಣೆ ಪ್ರಮಾಣಪತ್ರದಲ್ಲಿ (Transfer Certificate)  ಜಾತಿ ಕಾಲಂ ಇಲ್ಲದ ಕಾರಣ ಗೋವಾದಿಂದ ಕರ್ನಾಟಕಕ್ಕೆ ಮಕ್ಕಳು ವರ್ಗಾವಣೆ ಪಡೆದುಕೊಂಡರೆ ಅದರಲ್ಲಿ “ಭಾರತೀಯ” ಎಂದು ಮಾತ್ರ ನಮೂದಿಸಲಾಗುತ್ತದೆ. ಕರ್ನಾಟಕದಿಂದ ಕನ್ನಡಿಗರ ಮಕ್ಕಳು ಗೋವಾಕ್ಕೆ ವರ್ಗಾವಣೆ ಪಡೆದುಕೊಂಡು ಬರುವಾಗ ಜಾತಿ ಕಾಲಂ ಇರುತ್ತದೆ. ಆದರೆ ಇದೇ ವಿದ್ಯಾರ್ಥಿಗಳು ಮತ್ತೆ ಪುನಃ ಕರ್ನಾಟಕಕ್ಕೆ ತೆರಳಬೇಕಾದರೆ ಜಾತಿ ಕಾಲಂ ಇರುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಮೀಸಲಾತಿಯ ಯಾವುದೇ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗದೆಯೇ ವಂಚಿತರಾಗುತ್ತಿದ್ದಾರೆ.

ಜಾತಿ ಕಾಲಂ ಸಮಸ್ಯೆ ಇಂದು ನಿನ್ನೆಯದಲ್ಲ. ಈ ತೊಂದರೆಯನ್ನು ಕಳೆದ ಹತ್ತಾರು ವರ್ಷಗಳಿಂದ ಗೋವಾದಲ್ಲಿನ ಕನ್ನಡಿಗರ ಮಕ್ಕಳು ಅನುಭವಿಸುತ್ತಲೇ ಇದ್ದಾರೆ. ಗೋವಾದಲ್ಲಿ ವ್ಯಾಸಂಗ ಮುಗಿಸಿ ಉನ್ನತ ವ್ಯಾಸಂಗಕ್ಕೆ ಅಥವಾ ಉದ್ಯೋಗಕ್ಕೆ ಕರ್ನಾಟಕಕ್ಕೆ ವಾಪಸ್ಸಾದ ಅದೆಷ್ಟೊ ಕನ್ನಡಿಗ ವಿದ್ಯಾರ್ಥಿಗಳು ಮೀಸಲಾತಿಯಿಂದ ವಂಚಿತರಾಗಿ ತೊಂದರೆ ಅನುಭವಿಸಿದ್ದಾರೆ.

ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರ್ಮಿಕರು ವಲಸೆ ಬರುತ್ತಾರೆ. ಆದರೆ ತಾವು ವಲಸೆ ಬರುವಾಗ ಮಕ್ಕಳನ್ನೂ ವರ್ಗಾವಣೆ ಮಾಡಿಕೊಂಡು ಗೋವಾದ ಶಾಲೆಗೆ ಸೇರಿಸಿದ ಎಲ್ಲ ಕನ್ನಡಿಗರು ಇಂದು ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತಂತೆ ಗೋವಾದ ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗೆ ಪತ್ರದ ಮುಖೇನ ಮನವಿ ಮಾಡಿದರೂ ಕೂಡ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಮುಂಬರುವ ದಿನಗಳಲ್ಲಾದರೂ ಕರ್ನಾಟಕದ ವಿವಿಧ ಇಲಾಖೆಗಳು ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ.

ಗೋವಾಕ್ಕೆ ಕರ್ನಾಟಕದಿಂದ ಮಕ್ಕಳ ವರ್ಗಾವಣೆ ಮಾಡಿಸಿ ಗೋವಾದಲ್ಲಿ ಶಾಲೆಗೆ ಸೇರಿಸಲು ಬಯಸುವ ವಲಸಿಗ ಕೂಲಿ ಕಾರ್ಮಿಕರೇ …ನಿಮ್ಮ ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಳ್ಳುವ ಆತಂಕವಿದೆ. ನೀವು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಅಥವಾ ಯಾವುದೇ ಮೀಸಲಾತಿ ಹೊಂದಿದ್ದರೆ ಗೋವಾಕ್ಕೆ ಶಾಲೆಗೆ ಸೇರಿಸಿದರೆ ಮೀಸಲಾತಿ ಕಳೆದುಕೊಳ್ಳುವ ಭೀತಿಯಿದೆ ಎಂಬ ಅಭಿಪ್ರಾಯ ಇಲ್ಲಿನ ಹಲವು ಕನ್ನಡಿಗರದ್ದಾಗಿದೆ.