ಸುದ್ದಿ ಕನ್ನಡ ವಾರ್ತೆ

ಪಣಜಿ: ಪ್ರಸಕ್ತ ಚತುರ್ಥಿಯ ಸಂದರ್ಭದಲ್ಲಿ ತೆಂಗಿನಕಾಯಿಗೆ ಹೆಚ್ಚಿದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಏರುತ್ತಿರುವ ತೆಂಗಿನಕಾಯಿ ಬೆಲೆಯನ್ನು ನಿಯಂತ್ರಿಸಲು, ಗೋವಾ ಸರ್ಕಾರವು ಗೋವಾ ರಾಜ್ಯದ ಜನತೆಗೆ ಸಬ್ಸಿಡಿ ದರದಲ್ಲಿ ತೆಂಗಿನಕಾಯಿ ಪೂರೈಸುವ ಯೋಜನೆ ಪ್ರಾರಂಭಿಸಿದೆ. ಗೋವಾ ಮಾರುಕಟ್ಟೆಯಲ್ಲಿ ದೊಡ್ಡ ತೆಂಗಿನಕಾಯಿಯ ಬೆಲೆ 70 ರೂ.ಗಳಷ್ಟಿದ್ದು, ಈಗ ಅದೇ ತೆಂಗಿನಕಾಯಿ ಗೋವಾ ನಿವಾಸಿಗಳಿಗೆ ಕೇವಲ 45 ರೂ.ಗಳಿಗೆ ಲಭ್ಯವಾಗಲಿದೆ. ಈ ಯೋಜನೆಗಾಗಿ ನೆರೆಯ ಕರ್ನಾಟಕ ರಾಜ್ಯದಿಂದ ಸುಮಾರು 1 ಲಕ್ಷ ತೆಂಗಿನಕಾಯಿಗಳನ್ನು ಖರೀದಿಸಲಾಗಿದೆ ಎಂದು ಗೋವಾ ತೋಟಗಾರಿಕೆ ನಿಗಮದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಸಚಿವ ರವಿ ನಾಯಕ್ ಅವರ ಸೂಚನೆಯಂತೆ, ಕೃಷಿ ಇಲಾಖೆ ಮತ್ತು ಗೋವಾ ರಾಜ್ಯ ತೋಟಗಾರಿಕೆ ನಿಗಮವು ಹಬ್ಬದ ಸಮಯದಲ್ಲಿ ‘ಲಾಭವಿಲ್ಲ, ನಷ್ಟವಿಲ್ಲ’ ಎಂಬ ತತ್ವದ ಮೇಲೆ ಕರ್ನಾಟಕದಿಂದ 1 ಲಕ್ಷ ತೆಂಗಿನಕಾಯಿ ಖರೀದಿಸಿ ಗೋವಾದ ಜನತೆಗೆ ಸಬ್ಸಿಡಿ ದರದಲ್ಲಿ ಪೂರೈಸಲು ಮುಂದಾಗಿದೆ. ಕರ್ನಾಟಕದಲ್ಲಿ ದೊಡ್ಡ ತೆಂಗಿನಕಾಯಿಯ ಬೆಲೆ ಪ್ರತಿ ಕಾಯಿಗೆ 40 ರೂ.ಗಳಾಗಿದ್ದು, ಅದೇ ತೆಂಗಿನಕಾಯಿಯನ್ನು ಗೋವಾಕ್ಕೆ ತಂದು ಸಬ್ಸಿಡಿ ದರ 45 ರೂ.ಗಳಿಗೆ ಮಾರಾಟ ಮಾಡುವ ಯೋಜನೆಯನ್ನು ಸರ್ಕಾರ ರೂಪಿಸಿದೆ, ಈ ಯೋಜನೆಯಲ್ಲಿ ಗೋವಾ ಸರ್ಕಾರ ಕೇವಲ 5 ರೂ.ಗಳ ಲಾಭ ಉಳಿಸಿಕೊಳ್ಳಲಿದೆ.

 

ಇದೀಗ ಮೊದಲ ಹಂತದಲ್ಲಿ, ಎರಡು ದಿನಗಳಲ್ಲಿ 25,000 ತೆಂಗಿನಕಾಯಿಗಳು ಕರ್ನಾಟಕದಿಂದ ಬರಲಿದೆ. ಇದು ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಹೆಚ್ಚಿಸಿ ಬೆಲೆಗಳನ್ನು ಸ್ಥಿರಗೊಳಿಸಲು ಸಹಾಯ ಮಾಡಲಿದೆ. ಈ ತೆಂಗಿನಕಾಯಿಗಳನ್ನು ಗೋವಾ ತೋಟಗಾರಿಕೆ ನಿಗಮದ ಕೇಂದ್ರಗಳ ಮೂಲಕ ಮತ್ತು ರಾಜ್ಯದ ಮೊಬೈಲ್ ವ್ಯಾನ್‍ಗಳ ಮೂಲಕ ರಿಯಾಯಿತಿ ದರದಲ್ಲಿ ರಾಜ್ಯದ ಜನತೆಗೆ ಮಾರಾಟ ಮಾಡಲಾಗುತ್ತದೆ. ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದಿಂದ ತಂದ ತೆಂಗಿನಕಾಯಿಗಳನ್ನು ಇದೇ ರೀತಿಯಲ್ಲಿ ಪೂರೈಸಲಾಗುವುದು ಎಂದು ಪ್ರೇಮೇಂದ್ರ ಶೇಟ್ ಮಾಹಿತಿ ನೀಡಿದ್ದಾರೆ.