ಸುದ್ದಿಕನ್ನಡ ವಾರ್ತೆ
Goa(ಮಡಗಾವ): ಬದುಕು ಎಷ್ಟು ಔಚಿತ್ಯಪೂರ್ಣ ಎಲ್ಲೊ ಹುಟ್ಟಿ ಎಲ್ಲೊ ಬೆಳೆಯುತ್ತೇವೆ ಅದಕ್ಕೆ ನಾವಾಡುವ ಭಾಷೆ ಮುಖ್ಯವಾಗಿರುತ್ತದೆ. ಜಾತಿ,ಧರ್ಮ ಏಕ ಸಂಸ್ಕøತಿಯನ್ನು ಬಿಂಬಿಸಿದರೆ ಭಾಷೆ ಬಹುಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ.ಭಾಷೆಯಿಂದ ಬಾಂಧವ್ಯ ವೃದ್ಧಿಯಾಗಿ ಬದುಕುಗಟ್ಟಿಯಾಗುತ್ತದೆ.ಅದಕ್ಕೆ ಸಾಕ್ಷಿಯೇ ಗೋವಾ ಕನ್ನಡ ಸಂಘ ಅರವತ್ತು ವಸಂತಗಳನ್ನು ಪೂರೈಸಿರುವದೇ ಸಾಕ್ಷಿ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಗಣೇಶ ಬಿಷ್ಟಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ವೀರಶೈವ ಲಿಂಗಾಯತ ಮಠ ಸಭಾಂಗಣ ಮಡಗಾಂವದಲ್ಲಿ ಗೋವಾ ಕನ್ನಡ ಸಂಘ ಮಡಗಾಂವ ಆಯೋಜಿಸಿದ್ದ ಎಸ್ ಎಸ್ ಸಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಕನ್ನಡದವರು ಹೊಟ್ಟಿಗೆ ಹಿಟ್ಟಿಲ್ಲದಿದ್ದರೂ ಜುಟ್ಟಕ್ಕೆ ಮಲ್ಲಿಗೆ ಬೇಕು ಎಂಬ ಸಂಸ್ಕೃತಿ ಉಳ್ಳವರು ಆದ್ದರಿಂದಲೇ ನಾಡಿನಾದ್ಯಂತ ಸಹೃದಯರಾಗಿ ಕಂಗೊಳಿಸಿದ್ದೇವೆ ಎಂದು ಹೇಳುತ್ತಾ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿಯೊಂದಿಗೆ ಅತ್ಯುತ್ತಮ ಸಾಧಕರಾಗಿರೆಂದು ಆಶಿಸಿದರು.

 

ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದ ಬಾಲವಿಕಾಸ ಅಕಾಡೆಮಿ ಸಂಸ್ಥಾಪಕ ಸದಸ್ಯರಾದ ಲೀಲಾವತಿ ಕುಲಕರ್ಣಿಯವರು ಮಾತನಾಡಿ-ಜೀವನದಲ್ಲಿ ಸಾಮಾಜಿಕ ಶಿಸ್ತು ಅತ್ಯಗತ್ಯ, ಬದುಕಿನಲ್ಲಿ ಸಂಸ್ಕಾರ ಬೆಳೆಸಿಕೊಳ್ಳಬೇಕು,ತೋರಿಕೆಯಾಗದ ಯೋಗ್ಯತೆಯನ್ನು ರೂಢಿಸಿಕೊಳ್ಳಬೇಕು.ಕನ್ನಡಿಗರ ಗುಣಧರ್ಮ ಎಲ್ಲದಕ್ಕೂ ಮಿಗಿಲಾದದ್ದು ಸಾಧು ಸಂತರು,ಶಿವಶರಣರು ನುಡಿದ ಭಾಷೆ ಕನ್ನಡ ಅವಿಚ್ಛಿನ್ನ ಭಾಷೆ ನಮ್ಮದು ಅದನ್ನು ನಾವುಗಳು ಉಳಿಸಿಕೊಂಡು ಸಾಗುವದು ನಮ್ಮ ಧರ್ಮವಾಗಬೇಕು ಆ ನಿಟ್ಟಿನಲ್ಲಿ ಗೋವಾ ಕನ್ನಡ ಸಂಘ ಉತ್ತಮ ಕಾರ್ಯ ಮಾಡುತ್ತಿದೆ ಎಂಬುವದೇ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಗೋವಾ ಕನ್ನಡ ಸಂಘದ ಅಧ್ಯಕ್ಷರಾದ ಮೋಹನ್ ಕಾಂಬಳೆ ರವರು ವಹಿಸಿ ಸಮಾರಂಭಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಮನಸ್ಕರು ಕಟ್ಟಿದ ಕನ್ನಡ ಸಂಘ ಇಂದು ಅರವತ್ತು ವಸಂತಗಳನ್ನು ದಾಟಿದೆ ಇದೊಂದು ಐತಿಹಾಸಿಕವಾಗಿ ಬೆಳೆದಿದೆ ಪ್ರತಿವರ್ಷ ಕನ್ನಡ ನಾಡು-ನುಡಿಗೆ ದುಡಿಯುವ ಸಾಧಕ ಸಾಹಿತಿಗಳನ್ನು ಆಹ್ವಾನಿಸಿ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸುತ್ತಿವೆ ಎಂದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಸಿ ಸಾಧಕ ವಿದ್ಯಾರ್ಥಿಗಳಾದ ಅಚ್ಯುತ ದೇಶಪಾಂಡೆ, ಸಾನ್ವಿ ಹಿರೇಮಠ, ಪ್ರತಿಕ್ಷಾ ಈಟಿ,ಪ್ರಾಚಿ ಮಾಸ್ತಿಹೊಳಿಮಠ,ಅಧಿತಿ ರಾವ್,ದೀಪಾ ಗಣೇಶ ಭಟ್,ಬೇಬಿ ದೇವಗಿರಿ, ಫಾಲಕ್ನಾಜ್ ಸೌದಾಗರ,ನೂರಾನಿ ಬಂಕಾಪುರ ಇವರನ್ನು ಸತ್ಕರಿಸಲಾಯಿತು.ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕನ್ನಡ ರಸಪ್ರಶ್ನೆ ಕಾರ್ಯಕ್ರಮವನ್ನು ಕಿರಣ ಕಮ್ಮಾರ ನಡೆಸಿಕೊಟ್ಟರು,

ಕುಮಾರಿ ಅರುಣಾ ಗಣೇಶ ಬಿಷ್ಟಣ್ಣನವರ ಭರತನಾಟ್ಯವನ್ನು ಪ್ರದರ್ಶಿಸಿದರು.ನಿಕಟಪೂರ್ವ ಅಧ್ಯಕ್ಷರಾದ ಮಲ್ಲಿಕಾರ್ಜುನಪ್ಪ, ಮೋಹನ್ ಪ್ಯಾಟಿ ಅತಿಥಿಗಳನ್ನು ಪರಿಚಯಿಸಿದರು.

ಶ್ವೇತಾ ಚಂದ್ರಕಾಂತ ಹಿರೇಮಠ ಪ್ರಾರ್ಥಿಸಿದರು. ಗೋವಾ ಕನ್ನಡ ಸಂಘದ ಮಹಿಳಾ ಸದಸ್ಯರು ನಾಡಗೀತೆ ಹೇಳಿದರು. ಗೋವಾ ಕನ್ನಡ ಸಂಘದ ಕಾರ್ಯದರ್ಶಿಗಳಾದ ಕೃಷ್ಣಾಜೀ ಬಗಲಿ ವಂದಿಸಿದರು. ಭಾರತಿ ಮೋಹನ ಕಾಂಬಳೆ ಮತ್ತು ಸ್ಮೀತಾ ಕೃಷ್ಣಾಜೀ ಬಗಲಿ ಕಾರ್ಯಕ್ರಮ ನಿರೂಪಿಸಿದರು.