ಸುದ್ಧಿಕನ್ನಡ ವಾರ್ತೆ

Goa: ಗೋವಾದಲ್ಲಿ ರಸ್ತೆ ಬದಿಯಲ್ಲಿ ಕಸ ಎಸೆದೀರಾ ಜೋಕೆ…ವಾಹನದ ಮೇಲೆ ಬಂದು ಕಸ ಎಸೆದರೆ ನಿಮ್ಮ ವಾಹನ ಜಫ್ತಿಯಾಗುವುದು ಮಾತ್ರವಲ್ಲದೆಯೇ ಭಾರಿ ದಂಡವನ್ನು ತೆರಬೇಕಾಗಲಿದೆ. ಇಂತಹದ್ದೊಂದು ಆದೇಶವನ್ನು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೊರಡಿಸಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ- ಗೋವಾ ರಾಜ್ಯ ಸರ್ಕಾರ ತ್ಯಾಜ್ಯ ನಿರ್ಮೂಲನೆಗೆ ಪ್ರಯತ್ನಿಸುತ್ತಿದೆ. ಆದರೆ ಇಂದಿಗೂ ಕೆಲವು ರಸ್ತೆಯ ಬದಿಯಲ್ಲಿ ಕಸ ಎಸೆದಿರುವುದು ಕಂಡುಬರುತ್ತದೆ. ಇಂತಹ ವರ್ತನೆಯನ್ನು ಇನ್ನು ಮುಂದೆ ಸಹಿಸುವುದಿಲ್ಲ. ರಸ್ತೆಯಲ್ಲಿ ಕಸ ಎಸೆಯುವವರಿಗೆ ಭಾರಿ ದಂಡ ವಿಧಿಸಿ ವಾಹನ ಜಪ್ತಿ ಮಾಡಲಾಗುವುದು. ಪಂಚಾಯತಿಗಳು, ನಗರಪಾಲಿಕೆ, ಮಹಾನಗರ ಪಾಲಿಕೆ ಮನೆ ಮನೆಗೆ ತೆರಳಿ ಕಸ ಎತ್ತುತ್ತಿವೆ. ಹೀಗಿದ್ದರೂ ಕೂಡ ಕೆಲವು ರಾತ್ರಿಯ ವೇಳೆಯಲ್ಲಿ ಚೀಲಗಳಲ್ಲಿ ಕಸ ತುಂಬಿ ವಾಹನಗಳಲ್ಲಿ ಬಂದು ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿದ್ದಾರೆ.

ಯಾರಾದರೂ ರಸ್ತೆ ಬದಿಯಲ್ಲಿ ಕಸ ಎಸೆಯುವುದು ಕಂಡುಬಂದರೆ ಅವರ ಪೋಟೊ ತೆಗೆದು ಪೋಲಿಸರಿಗೆ ಮಾಹಿತಿ ನೀಡಿ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಜನತೆಯ ಬಳಿ ಮನವಿ ಮಾಡಿದ್ದಾರೆ,
ಗೋವಾ ರಾಜ್ಯದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನ ಮುಂದುವರೆಯಲಿದೆ. ಈ ಅಭಿಯಾನದ ಅಡಿಯಲ್ಲಿ ಗೋವಾ ರಾಜ್ಯಾದ್ಯಂತ ಸ್ವಚ್ಛತಾ ಕಾರ್ಯ ಮುಂದುವರೆದಿದೆ. ರಾಜ್ಯವನ್ನು ಕಸದಿಂದ ಮುಕ್ತವಾಗಿರಿಸಲು ಜನತೆಯ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.