ಸುದ್ದಿಕನ್ನಡ ವಾರ್ತೆ
Belagavi/Goa: ದಿನನಿತ್ಯದ ಆಹಾರದಲ್ಲಿ ಪ್ರಮುಖವಾಗಿರುವುದು ತರಕಾರಿ. ಕರ್ನಾಟಕದ ವಿವಿಧ ಭಾಗಗಳಿಂದ ಅದರಲ್ಲೂ ಪ್ರಮುಖವಾಗಿ ಬೆಳಗಾವಿ ಜಿಲ್ಲೆಯಿಂದ ಪ್ರತಿದಿನ ಅತಿ ಹೆಚ್ಚಿನ ಪ್ರಮಾಣದಲ್ಲಿ ಗೋವಾ ರಾಜ್ಯಕ್ಕೆ ತರಕಾರಿ( Vegetables) ಪೂರೈಕೆಯಾಗುತ್ತದೆ. ಬೆಳಗಾವಿಯಿಂದ ಪ್ರತಿದಿನ ಸುಮಾರು 40 ಟ್ರಕ್ ತರಕಾರಿ ಗೋವಾಕ್ಕೆ ಬರುತ್ತದೆ. ಆದರೆ ಕಳೆದ ಕೆಲ ವರ್ಷಗಳಿಂದ ಗೋವಾ ರಾಜ್ಯ (Goa State)ಸ್ವಾವಲಂಬನೆ ಸಾಧಿಸಲು ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಗೋವಾದಲ್ಲಿ ತರಕಾರಿ ಬೆಳೆ ಹೆಚ್ಚುತ್ತಿರುವುದರಿಂದ ಬೆಳಗಾವಿಯಿಂದ ಪೂರೈಕೆಯಾಗುವ ತರಕಾರಿ ಬೇಡಿಕೆ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಲು ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯಿಂದಲೇ ಅತಿಹೆಚ್ಚು ಪ್ರಮಾಣದಲ್ಲಿ ಪ್ರತಿದಿನ ಗೋವಾ ರಾಜ್ಯಕ್ಕಲೆ ತರಕಾರಿ ಪೂರೈಕೆಯಾಗುತ್ತದೆ. ಬೆಳಗಾವಿಯ ಚಿಕ್ಕೋಡಿ, ಸಂಕೇಶ್ವರ, ಘಟಪ್ರಭಾ,ಸೇರಿದಂತೆ ವಿವಿದೆಡೆಯಿಂದ ಸುಮಾರು 180 ಕ್ಕೂ ಹೆಚ್ಚು ಸಗಟು ವ್ಯಾಪಾರಿಗಳು ಗೋವಾಕ್ಕೆ ಪ್ರತಿದಿನ ತರಕಾರಿ ಪೂರೈಕೆ ಮಾಡುತ್ತಾರೆ. ಈ ಹಿಂದೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗೋವಾಕ್ಕೆ ಬೆಳಗಾವಿಯಿಂದ ತರಕಾರಿ (Vegetables from Belgaum to Goa) ಪೂರೈಕೆಯಾಗುತ್ತಿತ್ತು. ಆದರೆ ಕಳೆದ ಸುಮಾರು ಮೂರ್ನಾಲ್ಕು ವರ್ಷಗಳಿಂದ ಗೋವಾ ರಾಜ್ಯ ಸರ್ಕಾರವು ಗೋವಾದಲ್ಲಿ ತರಕಾರಿ ಬೆಳೆಗೆ ಒತ್ತು ಕೊಡುತ್ತಿದ್ದು ಸ್ವಾವಲಂಭನೆ ಸಾಧಿಸಲು ಮುಂದಾಗಿರುವುದು ಬೆಳಗಾವಿ ಜಿಲ್ಲೆಯ ತರಕಾರಿ ವ್ಯಾಪಾರಿಗಳಿಗೆ ಕೊಂಚ ಹೊಡೆತ ಬೀಳುವಂತಾಗಿದೆ. ಗೋವಾಕ್ಕೆ ಬೆಳಗಾವಿಯಿಂದ ತರಕಾರಿ ಪೂರೈಕೆಯಲ್ಲಿ ಕೊಂಚ ಇಳಿಕೆಯಾದರೂ ಗೋವಾದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವಂತೆಯೇ ಬೇಡಿಕೆಯು ಕೂಡ ಹೆಚ್ಚುತ್ತಿರುವುದರಿಂದ ಕರ್ನಾಟಕದ ತರಕಾರಿ ಬೇಡಿಕೆಯಲ್ಲಿ ಹೆಚ್ಚೇನೂ ಇಳಿಕೆಯಾಗುವುದಿಲ್ಲ ಎಂಬುದು ಇಲ್ಲಿನ ತರಕಾರಿ ವ್ಯಾಪಾರಿಗಳ ಅಭಿಪ್ರಾಯವಾಗಿದೆ.

ಬೆಳಗಾವಿ ಜಿಲ್ಲೆಯಿಂದ ಪ್ರತಿದಿನ ಗೋವಾಕ್ಕೆ ಸುಮಾರು 40 ಟ್ರಕ್ ತರಕಾರಿ ಪೂರೈಕೆಯಾಗುತ್ತದೆ. ಗೋವಾ ರಾಜ್ಯದಲ್ಲಿ ಎಷ್ಟೇ ತರಕಾರಿ ಬೆಳೆದರೂ ಕೂಡ ಕರ್ನಾಟಕದಿಂದಲೇ ಶೇ 90 ರಷ್ಟು ತರಕಾರಿ ಗೋವಾಕ್ಕೆ ಪೂರೈಕೆಯಾಗುತ್ತಿರುವುದು ಹೆಮ್ಮೆಯ ಸಂಗತಿ.

ಭೌಗೋಳಿಕವಾಗಿ ಸಣ್ಣ ರಾಜ್ಯವಾಗಿರುವ ಗೋವಾದಲ್ಲಿ ಕೃಷಿ ಭೂಮಿ (Agricultural land) ಕಡಿಮೆಯಿದೆ. ಗೋವಾದಲ್ಲಿ ಕೃಷಿಕರ ಸಂಖ್ಯೆ ಕಡಿಮೆಯಿದೆ. ಕೃಷಿ ಕಾರ್ಮಿಕರ ಕೊರತೆಯಿದೆ. ಗೋವಾದಲ್ಲಿ ಹೆಚ್ಚಿನ ಆದಾಯ ಪ್ರವಾಸೋದ್ಯಮದಿಂದ ಬರುತ್ತದೆ. ಇವೆಲ್ಲ ಕಾರಣಗಳಿಂದ ಗೋವಾದಲ್ಲಿ ಎಷ್ಟೇ ತರಕಾರಿ ಬೆಳೆದರೂ ಕೂಡ ಕರ್ನಾಟಕದ ತರಕಾರಿ ಬೇಡಿಕೆಯಂತೂ ಕಡಿಮೆಯಾಗುವುದಿಲ್ಲ ಎಂಬುದು ಹಲವರ ಅಭಿಪ್ರಾಯವಾಗಿದೆ.