Banner Ad

ಸುದ್ದಿ ಕನ್ನಡ ವಾರ್ತೆ
ಆನೇಕಲ್:ಸೂರ್ಯನಗರ ಪೋಲಿಸ್ ಠಾಣೆ ವ್ಯಾಪ್ತಿಯ ಚಂದಾಪುರ-ಆನೇಕಲ್ ಮುಖ್ಯರಸ್ತೆಯ ಮರಸೂರು ಸಮೀಪ ಸಿನಿಮಾಗಳಲ್ಲಿ ಕಾಣುವಂತೆಯೇ ಲಾರಿಯನ್ನು ಅಡ್ಡಗಟ್ಟಿ ದರೋಡೆ ನಡೆಸಿದ್ದ ಗ್ಯಾಂಗ್‌ವೊಂದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂರ್ಯನಗರ ಪೊಲೀಸರು ಕೇವಲ 24 ಗಂಟೆಗಳಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಸರ್ಜಾಪುರದ ಸೋಂಪುರ ನಿವಾಸಿ ಶರತ ಕುಮಾರ(23), ಆನೇಕಲ್ ತಾಲೂಕಿನ ಕರ್ಪೂರು ಗ್ರಾಮದ ರೂಪೇಶ (26) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಕಂಠಪೂರ್ತಿ ಮದ್ಯ ಸೇವಿಸಿದ್ದ ಆರೋಪಿಗಳು ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. ಜೀವಭಯದಿಂದ ಚಾಲಕ ಸ್ಥಳದಿಂದ ಓಡಿ ಹೋದ ಬಳಿಕ ಲಾರಿಯನ್ನು ಕೊಂಡೊಯ್ದಿದ್ದರು. ಬಳಿಕ ಲಾರಿಯಲ್ಲಿದ್ದ ಜಿಪಿಎಸ್/ಜಿಪಿಆರ್‌ಎಸ್ ವ್ಯವಸ್ಥೆ ಮೂಲಕ ಮಾಲೀಕರು ವಾಹನ ಪತ್ತೆಹಚ್ಚಿದಾಗ, ಅದನ್ನು ಹಿಂತಿರುಗಿಸಲು ಹಣ ಬೇಡಿಕೆ ಇಡುವ ಸಂಚು ರೂಪಿಸಿದ್ದರು ಎನ್ನಲಾಗಿದೆ.

Banner Ad

ಘಟನೆ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಇನ್ಸ್‌ಪೆಕ್ಟರ್‌ ಚಂದ್ರಪ್ಪ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ತನಿಖೆ ವೇಳೆ ಲಾರಿ ಸರ್ಜಾಪುರದ ಸೋಂಪುರ ಪ್ರದೇಶದಲ್ಲಿರುವುದು ಪತ್ತೆಯಾಗಿದ್ದು, 24 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬಂಧಿಸಿ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯಲ್ಲಿ ಪ್ರಮುಖ ಆರೋಪಿ ಶರತ್ ಕುಮಾರ್ ಈ ಹಿಂದೆಯೂ ರಾಬರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಹಿತಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Banner Ad