ಸುದ್ದಿ ಕನ್ನಡ
ಜೋಯಿಡಾ : ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಕ್ಕೆ ಸಿ.ಡಿ.ಪಿ.ಒ. ರವರು ತಮ್ಮ ಸಿಬ್ಬಂದಿಯೊಂದಿಗೆ ಇಂದು ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂಗನವಾಡಿ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವುದನ್ನು ಕಂಡು ಅಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದರು. ಈ ಕುರಿತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳನ್ನು (EO) ಮತ್ತೊಮ್ಮೆ ಸಂಪರ್ಕಿಸಿ, ಕಟ್ಟಡ ದುರಸ್ತಿಗೆ ತಕ್ಷಣವೇ ಪತ್ರ ಬರೆಯುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಅತ್ಯಂತ ಮಹತ್ವದ ಪೂರ್ವ ಪ್ರಾಥಮಿಕ ಶಿಕ್ಷಣವು ಅಂಗನವಾಡಿಗಳಿಂದಲೇ ಆರಂಭವಾಗುತ್ತದೆ. ಇಲ್ಲಿನ ಮಕ್ಕಳು ಬುದ್ಧಿವಂತರಾಗಿದ್ದು, ಕೇಂದ್ರದಲ್ಲಿರುವ ಎಲ್ಲಾ 10 ಮಕ್ಕಳಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು. ಮಕ್ಕಳ ಮುಂದಿನ ಶಿಕ್ಷಣದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ್ ವೈದ್ಯ ಮಾತನಾಡಿ, “ಅಂಗನವಾಡಿಯಲ್ಲಿ ಮಕ್ಕಳು ಉತ್ತಮವಾಗಿ ತಯಾರಾದರೆ, ಮುಂದೆ ನಮ್ಮ ಶಾಲೆಯ ದಾಖಲಾತಿಗೂ ಪೂರಕವಾಗುತ್ತದೆ” ಎಂದು ಅಂಗನವಾಡಿಯ ಮಹತ್ವವನ್ನು ಶ್ಲಾಘಿಸಿದರು.
ಈ ವೇಳೆ ಊರಿನ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಹಾಜರಿದ್ದರು. ಭೇಟಿ ನೀಡಿ ಸಮಸ್ಯೆ ಆಲಿಸಿದ ಸಿ.ಡಿ.ಪಿ.ಒ. ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಯಿತು.
