Banner Ad

ಸುದ್ದಿ ಕನ್ನಡ ವಾರ್ತೆ
ಶಿರಸಿ: ಮಹಾ ಶಿವರಾತ್ರಿ ಪ್ರಯುಕ್ತ ಶಾಲ್ಮಲಾ ನದಿಯೊಳಗಿನ ಪವಿತ್ರ ಸ್ಥಳ ಸಹಸ್ರಲಿಂಗ ಕ್ಷೇತ್ರದಲ್ಲಿ ನದಿಗಳ ಉಳಿವಿಗಾಗಿ ಸಂಕಲ್ಪಿತ ಗಂಗಾರತಿ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳು ಶಿಷ್ಯರ ಜೊತೆ ಸೇರಿ ಗಂಗಾರತಿ ನಡೆಸಿ ಫುಳಕದ ಭಾವ ನೀಡಿದರು.

ಬಳಿಕ ಆಶೀರ್ವಚನ ನುಡಿದ ಅವರು, ನದಿಗಳು ಉಳಿದರೆ ನಾಡು ಉಳಿಯುತ್ತದೆ; ನದಿಗಳು ಅಳಿದರೆ ನಾಡು ಅಳಿದು ಹೋಗುತ್ತದೆ. ಗಂಗಾವಳಿ, ಅಘನಾಶಿನಿ, ಶಾಲ್ಮಲಾ ಸೇರಿದಂತೆ ಪ್ರತಿಯೊಂದು ನದಿಯೂ ಪವಿತ್ರ ಗಂಗೆ ಸಮಾನ. ಗಂಗಾ ನದಿಗೆ ಅಪಾಯವಾದರೆ ಇಡೀ ಉತ್ತರ ಭಾರತ ಎದ್ದು ನಿಲ್ಲುತ್ತದೆ. ಅದೇ ರೀತಿ ನಮ್ಮ ನದಿಗಳಿಗೆ ಅಪಾಯವಿದೆ. ನಾವೂ ಗಟ್ಟಿಯಾಗಿ ನಿಲ್ಲಬೇಕು ಎಂದು ನುಡಿದರು.

Banner Ad

ನದಿಗಳಲ್ಲಿ ನೀರಿನ ಹರಿವು ನಿಂತರೆ ಕೃಷಿ, ವನ್ಯಜೀವಿ ಹಾಗೂ ಅಂತರ್ಜಲದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಘಟ್ಟದ ಕೆಳಭಾಗದ ಜನಜೀವನವೂ ಈ ನದಿಗಳ ಮೇಲೆ ಅವಲಂಬಿತವಾಗಿದೆ. ನದಿ ಜೋಡಣೆ ಯೋಜನೆಗಳನ್ನು ವಿರೋಧಿಸಿಸಬೇಕು. ನದಿಗಳನ್ನು ಉಳಿಸಲು ಭಕ್ತಿ ಶಕ್ತಿಯಾಗಬೇಕು ಎಂದು ಅವರು ಕರೆ ನೀಡಿದರು. ಗಂಗಾಷ್ಟಮಿ ಹಾಗೂ ಶಿವರಾತ್ರಿ ದಿನಗಳಲ್ಲಿ ನದಿಗಳ ತೀರದಲ್ಲಿ ಪ್ರಾರ್ಥನೆ, ಆರತಿ ನಡೆಸುವಂತೆ ಸೂಚಿಸಿದ ಶ್ರೀಗಳು, ಯುಗಾದಿಯಿಂದ ಶ್ರೀರಾಮ ನವಮಿವರೆಗೆ ಮನೆಮನೆಗಳಲ್ಲಿ ಭಜನೆ ಮಾಡುವ ಮೂಲಕ ನದಿ ಜೋಡಣೆ ವಿರೋಧಿಸುವಂತಾಗಬೇಕು. ಭಕ್ತಿ ಶಕ್ತಿಯಾಗಬೇಕು ಎಂದರು.
ಪಾದಯಾತ್ರೆ, ಜಾಥಾ ಮಾಡುವ ಸಂದರ್ಭ ಬಂದರೆ ಜನ ಕಿಕ್ಕಿರಿದು ಸೇರಬೇಕು ಎಂದೂ ಶ್ರೀಗಳು ಹೇಳಿದರು.
ಕಾರ್ಯಕ್ರಮ ಆಯೋಜಿಸಿದ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಪ್ರಮುಖ ಅನಂತ ಅಶೀಸರ, ಶಿವರಾತ್ರಿಯಂದು ಶಾಲ್ಮಲಾ, ಬೇಡ್ತಿ, ಗಂಗಾವಳಿ, ಅಘನಾಶಿನಿಯ ಸುಮಾರು ೨೦ ಸ್ಥಳಗಳಲ್ಲಿ ಪೂಜೆ, ಆರತಿ ನಡೆಯುತ್ತಿದೆ. ಆರತಿಯ ಶಕ್ತಿ ಏನು ಎಂಬುದನ್ನು ಸಮಾಜಕ್ಕೆ ತೋರಿಸಬೇಕಿದೆ. ನದಿಗಳ ರಕ್ಷಣೆಯ ಹೋರಾಟ ಇನ್ನಷ್ಟು ಬಲಶಾಲಿಯಾಗಿ ಮುಂದುವರಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಮಠದ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತಿ ಮಹಾಸ್ವಾಮೀಜಿ, ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಪ್ರಮುಖರು, ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಸುರೇಶ ಹಕ್ಕಿಮನೆ, ಅನಂತ ಭಟ್ಟ, ರತ್ನಾಕರ ಬಾಡಲಕೊಪ್ಪ ಇತರರು ಇದ್ದರು.
ಭಕ್ತರು ದೀಪಾರತಿ ಬೆಳಗಿಸಿ ಪವಿತ್ರ ನದಿಗಳ ಉಳಿವಿಗೆ ಸಂಕಲ್ಪ ಕೈಗೊಂಡರು.

ಶಿರಸಿಯಲ್ಲಿ ನಡೆದ ನದಿ ಜೋಡಣಾ ವಿರೋಧಿ ಜನ ಸಮಾವೇಶ ಮುಖ್ಯಮಂತ್ರಿಗಳ ಕಿವಿಗೆ ಮುಟ್ಟಿದೆ. ಅವರು ಇದು ಕೇಂದ್ರದ್ದು ಎನ್ನುತ್ತಾರೆ. ಕೇಂದ್ರದವರು ರಾಜ್ಯದ್ದು ಎನ್ನುತ್ತಾರೆ. ಇಬ್ಬರೂ ನಮ್ಮನ್ನು ಆಟ ಆಡಿಸುತ್ತಿದ್ದಾರೆ. ಯೋಜನೆ ವಿರುದ್ಧ ಜನ ಗಟ್ಟಿಯಾಗಿ ನಿಂತರೆ ಈ ಆಟ ನಿಲ್ಲಿಸಬಹುದು.
ಸ್ವರ್ಣವಲ್ಲೀ ಶ್ರೀ

Banner Ad