ಸುದ್ದಿ ಕನ್ನಡ ವಾರ್ತೆ

ಶಿರಸಿ:ಬೇಡ್ತಿ ವರದಾ ನದಿ ತಿರುವು ಯೋಜನೆಯ ವಿಸ್ಕ್ರತ ವರದಿ ಸಿದ್ಧಪಡಿಸುವಂತೆ ರಾಜ್ಯ ಜಲಸಂಪನ್ಮೂಲ ಸಚಿವ ಚೆಲುವರಾಯಸ್ವಾಮಿ ಅಧಿಕಾರಿಗಳ ಸಭೆ ಕರೆದು ಸೂಚಿಸಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು ತಕ್ಷಣ ಸಚಿವರನ್ನು ಭೇಟಿ ಮಾಡಿ ನದಿ ತಿರುವು ಯೋಜನೆಯನ್ನು ಸಂಪೂರ್ಣ ಕೈ ಬಿಡುವಂತೆ ಒತ್ತಾಯಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದ್ದಾರೆ.

ಬೇಡ್ತಿ ವರದಾ ನದಿ ತಿರುವು ಯೋಜನೆಯ ವಿರುದ್ಧ ಈಗಾಗಲೇ ಸಾಕಷ್ಟು ಹೋರಾಟಗಳನ್ನು ನಡೆಸಲಾಗಿದೆ.ಈ ಹೋರಾಟದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರುಗಳೂ ಭಾಗವಹಿಸಿದ್ದಾರೆ. ವೇದಿಕೆಯಲ್ಲಿ ನದಿ ತಿರುವು ಯೋಜನೆಯನ್ನು ಖಂಡಿಸುವುದಾಗಿ ಹೇಳುವ ಅವರು ಸರ್ಕಾರದ ಮಟ್ಟದಲ್ಲಿ ಯಾಕೆ ಮಾತನಾಡುತ್ತಿಲ್ಲ? ಇದೀಗ ಡಿಪಿಆರ್ ಸಿದ್ದತೆ ವರೆಗೆ ನದಿ ತಿರುವು ಯೋಜನೆ ಬೆಳವಣಿಗೆ ಕಂಡಿದೆ. ಇನ್ನೂ ಮಾತನಾಡದೇ ಇನ್ಯಾವಾಗ ಮಾತನಾಡುತ್ತಾರೆ? ಬೇಡ್ತಿ ವರದಾ ನದಿ ತಿರುವು ಯೋಜನೆಗೆ ಇವರದ್ದು ಬಾಹ್ಯ ಬೆಂಬಲ ವಿದೆಯೇ? ಇವರ ದ್ವೀಮುಖ ನೀತಿಯನ್ನು ಗಮನಿಸಿದರೆ ಅನುಮಾನ ಬರಲಾರಂಭಿಸಿದೆ ವೇದಿಕೆ ಮೇಲೆ ಭಾಷಣ ಮಾಡುವ ಇರುವ ಜನರ ಮೇಲಿನ ಕಾಳಜಿ ಮುಖ್ಯಮಂತ್ರಿಗಳ‌ ಬಳಿ ಹೋದಾಗ ಏಕೆ ಇರುವುದಿಲ್ಲ? ಜಿಲ್ಲಾ ಉಸ್ತುವಾರಿ ಸಚಿವ ಶಿರಸಿಗೆ ಬಂದಾಗ ಇಷ್ಟು ದೊಡ್ಡ ಯೋಜನೆ ಅಂದಮೇಲೆ ಹಲವು ಪ್ರದೇಶಗಳು ಮುಳುಗಡೆ ಆಗುತ್ತದೆ ಎಂದು ಹೇಳುವಾಗ ಪಕ್ಕದಲ್ಲೇ ಇದ್ದ ಕಾಂಗ್ರೆಸ್ ಶಾಸಕರು ಯಾಕೆ ಮಾತನಾಡಲಿಲ್ಲ? ಅಲ್ಲಿಯೇ ತಮ್ಮ ವಿರೋಧವನ್ನು ವ್ಯಕ್ತ ಪಡಿಸಬಹುದಿತ್ತಲ್ಲವೇ ? ಕಾಂಗ್ರೆಸ್ ಶಾಸಕರಿಗೆ ಸಚಿವರಿಗೆ ನದಿ ತಿರುವು ಯೋಜನೆಯ ಬಗ್ಗೆ ಆಸಕ್ತಿ ಇದೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕೆ ಎಂದು ಪ್ರಶ್ನಿಸಿದ್ದಾರೆ.
ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದ ನಂತರ ಒಂದೇ ಒಂದು ಸಲವೂ ಜಿಲ್ಲೆಯ ಕಾಂಗ್ರೆಸ್ ಶಾಸಕರು ಅವರನ್ನು ಭೇಟಿ ಮಾಡಿ ನದಿ ತಿರುವು ಯೋಜನೆಯ ಬಗ್ಗೆ ಮಾತನಾಡಲಿಲ್ಲ. ಸಮಿತಿಯವರನ್ನೂ ಭೇಟಿ ಮಾಡಿಸಲಿಲ್ಲ. ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಮಾತನಾಡಿ ಯೋಜನೆಯನ್ನು ವಿರೋಧಿಸುವ ತಾಕತ್ ಇದ್ದರೆ ಈ ಯೋಜನೆ ಡಿಪಿಆರ್ ಸಿದ್ದತೆಗೆ ವರೆಗೆ ಬರಲು ಸಾಧ್ಯವೇ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನದಿ ತಿರುವು ಯೋಜನೆ ವಿಚಾರ ಬಂದಾಗ ಇದು ಕೇಂದ್ರ ಸರ್ಕಾರದ ಯೋಜನೆ ಎಂದು ಕೇಂದ್ರ ಸರ್ಕಾರದ ಕಡೆಗೆ ಬೆಟ್ಟು ತೋರಿಸಿದ್ದರು. ಇದೀಗ ರಾಜ್ಯ ಸರ್ಕಾರದ ಸಚಿವರೇ ಸಭೆ ನಡೆಸಿ ಡಿಪಿಆರ್ ಸಿದ್ದತೆಗೆ ಸೂಚಿಸಿರುವುದರಿಂದ ನದಿ ತಿರುವು ಯೋಜನೆಯ ಚೆಂಡು ರಾಜ್ಯ ಸರ್ಕಾರದ ಅಂಗಳದಲ್ಲೇ ಇದೆ ಎಂಬುದು ಜಗಜ್ಜಾಹೀರಾಗಿದೆ. ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ ಇಷ್ಟೊಂದು ಕೊಡುಗೆಯನ್ನು ಕೊಟ್ಟರೂ ಸಹ ಮತ್ತೇ ಮತ್ತೇ ಜಿಲ್ಲೆಯ ಜನರ ಬದುಕಿನ ಜೊತೆಗೆ ರಾಜ್ಯ ಸರ್ಕಾರ ಆಟವಾಡಲು ಮುಂದಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಜಿಲ್ಲೆಯ ಜನರನ್ನು ಬಲಿಕೊಟ್ಟು ಇನ್ಯಾವುದೋ ಜಿಲ್ಲೆಯ ಜನರಿಗೆ ಉಪಕಾರ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡೆ ನಿಜಕ್ಕೂ ಖಂಡನೀಯ. ಇಷ್ಟು ದಿನ ಶಾಂತಿಯುತವಾಗಿ ನಡೆದಿದ್ದ ಹೋರಾಟಗಳು ಇನ್ನುಮುಂದೆ ಉಗ್ರ ಸ್ವರೂಪ ಪಡೆಯುವ ಅನಿವಾರ್ಯತೆ ಬರಲಿದೆ. ರಾಜ್ಯ ಸರ್ಕಾರ ತಕ್ಷಣ ಬೇಡ್ತಿ ವರದಾ ನದಿ ತಿರುವು ಯೋಜನೆಯನ್ನು ಕೈಬಿಡಬೇಕು. ಡಿಪಿಆರ್ ಸಿದ್ದತೆಗೆ ನೀಡಿದ ಆದೇಶವನ್ನು ಹಿಂಪಡೆಯಬೇಕು ಎಂದು ಅನಂತಮೂರ್ತಿ ಹೆಗಡೆ ಒತ್ತಾಯಿಸಿದ್ದಾರೆ.