ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಜಿಲ್ಲೆಯ ಜನ ನಮ್ಮ ಜೀವನದಿಯನ್ನು ಉಳಿಸಿಕೊಳ್ಳಲು ಇತ್ತ ಹೋರಾಟ ನಡೆಸುತ್ತಿದ್ದರೆ, ಅತ್ತ ಸರ್ಕಾರವು ಪರಿಸರ ವಿರೋಧಿ ಹಾಗೂ ಜನವಿರೋಧಿಯಾಗಿರುವ ನದಿ ತಿರುವು ಯೋಜನೆಯ ಜಾರಿಗೆ ಸಭೆಗಳ ಮೇಲೆ ಸಭೆ ನಡೆಸುತ್ತಲೇ ಇದೆ.
ಬೇಡ್ತಿ -ವರದಾ ನದಿ ಜೋಡಣೆ ಯೋಜನೆಯ ಕಾಮಗಾರಿಗಳನ್ನು ತುರಿತಗತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್ ಚೆಲುವರಾಯಸ್ವಾಮಿ ರವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಉನ್ನತಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆದಿದೆ.
ಯೋಜನೆಯ ಮಾರ್ಗ ಮಧ್ಯೆ ಹಾವೇರಿ ಜಿಲ್ಲೆಯಲ್ಲಿ ನೀರಿನ ಶೇಖರಣ ಘಟಕ ನಿರ್ಮಿಸಲು ಸೂಕ್ತ ಸ್ಥಳವನ್ನು ಕೂಡಲೇ ಗುರುತಿಸಬೇಕು ಹಾಗೂ ನೀರಾವರಿ ಅಚ್ಚುಕಟ್ಟು ಪ್ರದೇಶವನ್ನು ತ್ವರಿತವಾಗಿ ನಿಗದಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಖಡಕ್ ನಿರ್ದೇಶನ ನೀಡಿದ್ದಾರೆ. ಯೋಜನೆಯ ಸಮೀಕ್ಷೆ ಮತ್ತು ತನಿಕ ಕಾರ್ಯಗಳಿಗೆ ಅರಣ್ಯ ಇಲಾಖೆಯಿಂದ ಅಗತ್ಯವಿರುವ ಅನುಮತಿಗಳನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ಪಡೆದುಕೊಳ್ಳಲು ಇಲಾಖೆಗಳ ನಡುವೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಅವರು ಸಲಹೆ ನೀಡಿದ್ದಾರೆ. ಇದರಿಂದಾಗಿ ಯೋಜನೆಗೆ ಜಿಲ್ಲೆಯ ಜನತೆಯಿಂದ ಎಷ್ಟೇ ವಿರೋಧ ವ್ಯಕ್ತವಾಗುತ್ತಿದ್ದರೂ ಕೂಡ ಸರ್ಕಾರ ಮಾತ್ರ ಕ್ಯಾರೆ ಅನ್ನದೆ ಯೋಜನೆ ಜಾರಿಗೊಳಿಸಲು ಮುಂದಾಗಿರುವುದು ಬರುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಜಂಟಿಯಾಗಿ ಶ್ರಮಿಸಿ ವಿಸ್ತೃತ ಯೋಜನಾ ವರದಿಯನ್ನು ನಿಗದಿ ಕಾಲಮಿತಿ ಒಳಗೆ ಪೂರ್ಣಗೊಳಿಸಬೇಕು ಎಂದು ಸಚಿವರು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ. ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ ಸಿದ್ಧಪಡಿಸಿರುವ ಈ ಬೃಹತ್ ಯೋಜನೆಗೆ 9652.73 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಪಶ್ಚಿಮಕ್ಕೆ ಹರಿಯುವ ಬೇಡ್ತಿ ನದಿಯ 524 Mm3 ಹೆಚ್ಚುವರಿ ನೀರನ್ನು ಮುಂಗಾರು ಹಂಗಾಮಿನಲ್ಲಿ ಪೈಪ್ಲೈನ್ ಮತ್ತು ಲಿಫ್ಟ್ ಮೂಲಕ ತುಂಗಭದ್ರ ಉಪಕಣಿವೆಗೆ ತಿರುಗಿಸಲಾಗುವುದು. ಈ ಪೈಕಿ 316 Mm3 ನೀರನ್ನು ಕೃಷಿ ಮತ್ತು ನೀರಾವರಿಗೆ, 131Mm3 ನೀರನ್ನು ಕೈಗಾರಿಕೆಗಳಿಗೆ ಹಾಗೂ 77Mm3 ನೀರನ್ನು ಕುಡಿಯುವ ಉದ್ದೇಶಗಳಿಗೆ ಬಳಸಿಕೊಳ್ಳಲು ನಿರ್ದಯಿಸಲಾಗಿದೆ.
ಯೋಜನೆಯಿಂದ ಧಾರವಾಡ, ಗದಗ, ಹಾವೇರಿ, ಮತ್ತು ಕೊಪ್ಪಳ ಜಿಲ್ಲೆಗಳ 700 53 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದ್ದು ಸುಮಾರು 20.21 ಲಕ್ಷ ಜನರಿಗೆ ನೇರ ಪ್ರಯೋಜನವಾಗಲಿದೆ ಎಂಬುದನ್ನು ಸಭೆಯಲ್ಲಿ ಚರ್ಚಿಸಲಾಗಿದೆ.
ಈ ತುರ್ತು ಸಭೆಯ ಚರ್ಚೆಯನ್ನು ಗಮನಿಸಿದರೆ ಉತ್ತರ ಕನ್ನಡ ಜಿಲ್ಲೆಗೆ ಮಾರಕವಾಗಿರುವ ಯೋಜನೆ ಜಾರಿಗೆ ಸರ್ಕಾರಕ್ಕೆ ಭಾರಿ ಗಡಿಬಿಡಿ ಆದಂತೆ ಕಂಡುಬರುತ್ತದೆ. ಸರ್ಕಾರವು ಕೇವಲ ಒಂದು ಭಾಗವಷ್ಟನ್ನೆ ಗಮನಿಸುತ್ತಿದೆಯೇ… ಇತ್ತ ಉತ್ತರ ಕನ್ನಡಕ್ಕೆ ಆಗುತ್ತಿರುವ ಅನ್ಯಾಯವನ್ನು ಗಮನಿಸುತ್ತಿಲ್ಲವೇ.,? ಜಿಲ್ಲೆಯ ಜನರ ಸತತ ಹೋರಾಟವನ್ನು ಸರ್ಕಾರ ಗಮನಿಸಿಲ್ಲವೇ…? ಎಂಬ ಪ್ರಶ್ನೆ ಎದುರಾಗಿದೆ.
