ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಯೂತ್ ಕ್ಲಬ್ ಅಣಶಿ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿವರ್ಷ ಆಯೋಜಿಸಲಾಗುವ ಈ ಬಾರಿ 27ನೇ ವರ್ಷದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯು ನವೆಂಬರ್ 8ರಿಂದ 11ರವರೆಗೆ ಅಣಶಿಯ ಶ್ರೀ ಶಿವನಾಥ ಮೈದಾನದಲ್ಲಿ ನಡೆಯಲಿದೆ.

2026-ನೇ ಸಾಲಿನ ಈ ಪಂದ್ಯಾವಳಿಯಲ್ಲಿ ಜೋಯಿಡಾ ತಾಲೂಕಿನ ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ ₹15,001, ದ್ವಿತೀಯ ಬಹುಮಾನವಾಗಿ ₹8,001 ಹಾಗೂ ತೃತೀಯ ಬಹುಮಾನವಾಗಿ ₹4,001 ನಗದು ಬಹುಮಾನ ನೀಡಲಾಗುವುದು. ಇದರೊಂದಿಗೆ ಆಕರ್ಷಕ ಟ್ರೋಫಿ ಹಾಗೂ ಇನ್ನಿತರ ಬಹುಮಾನಗಳನ್ನು ವಿತರಿಸಲಾಗುವುದು.
ಪಂದ್ಯಾವಳಿಯ ಉದ್ಘಾಟಕರಾಗಿ ಅಣಶಿ ಉಪ ವಲಯ ಅರಣ್ಯಾಧಿಕಾರಿ ಸಚಿನ್ ನಾಯ್ಕ, ಎಂ. ಎಸ್. ಕಾಜುಗಾರ, ಶ್ರೀ ಸೀತಾರಾಮ ಅಣಶಿಕರ್, ಕೃಷ್ಣ ವೇಳಿಪ ಗೋವಿಂದ ಅಣಶಿಕರ್ ಹಾಗೂ ರತ್ನಾಕರ ಕಾಜುಗಾರ ಭಾಗವಹಿಸಲಿದ್ದಾರೆ.

 

ಮುಖ್ಯ ಅತಿಥಿಗಳಾಗಿ ಅಣಶಿ ವಲಯ ಅರಣ್ಯಾಧಿಕಾರಿ ರಾಮು ಗೌಡ ಉಪಸ್ಥಿತರಿರಲಿದ್ದಾರೆ.
ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ₹1,000 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ತಂಡದಲ್ಲಿ 11 ಆಟಗಾರರು ಕಡ್ಡಾಯವಾಗಿದ್ದು, ಪಂದ್ಯಾವಳಿ ಆರಂಭಕ್ಕೂ ಮುನ್ನ ಸಲ್ಲಿಸಿದ 14 ಆಟಗಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ. ಪಂದ್ಯಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ.

ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಂದ್ಯಾವಳಿಯನ್ನು ವೀಕ್ಷಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಯೂತ್ ಕ್ಲಬ್ ಅಣಶಿಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಅಖಿಲ್, ಸುರಜ್, ಪ್ರವೀಣ ಹಾಗೂ ಗೋವಿಂದ ಅವರನ್ನು ಸಂಪರ್ಕಿಸಬಹುದು.