ಸುದ್ದಿ ಕನ್ನಡ ವಾರ್ತೆ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯು ನೀಡುವ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ನಾಲ್ವರು ಸಾಧಕ ಪತ್ರಕರ್ತರನ್ನು ವಿವಿಧ ಗೌರವಗಳಿಗೆ ಆಯ್ಕೆ ಮಾಡಲಾಗಿದೆ. ನ.16 ರಂದು ಶಿರಸಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಧಕರನ್ನು ಗೌರವಿಸಲಾಗುವುದು.

ಜಿಲ್ಲಾ ಪತ್ರಿಕಾ ಮಂಡಳಿಯು ಮೊದಲ ಬಾರಿಗೆ ನೀಡುತ್ತಿರುವ ರಾಜ್ಯಮಟ್ಟದ *’ಮಾಧ್ಯಮ ರತ್ನ’* ಪ್ರಶಸ್ತಿಗೆ ತುಮಕೂರಿನ ಹಿರಿಯ ವರದಿಗಾರ ಎಚ್.ಆರ್. ಶ್ರೀಶ ಅವರು ಭಾಜನರಾಗಿದ್ದಾರೆ. ಈ ಪ್ರಶಸ್ತಿಯು 15 ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಬಿ.ಎ., ಕನ್ನಡ ಎಂ.ಎ. ಹಾಗೂ ಪತ್ರಿಕೋದ್ಯಮ ಪದವೀಧರರಾದ ಇವರು, 1975ರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಪತ್ರಿಕಾರಂಗ ಪ್ರವೇಶಿಸಿ ಕಲ್ಬುರ್ಗಿ, ಬೀದರ್, ರಾಯಚೂರು, ವಿಜಯಪುರ, ಹುಬ್ಬಳ್ಳಿ ಹಾಗೂ ಗದಗದಲ್ಲಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದರು. ನಂತರ ಕನ್ನಡಪ್ರಭ ಪತ್ರಿಕೆಯಲ್ಲಿ 10 ವರ್ಷಗಳ ಕಾಲ ಮೈಸೂರು ಹಾಗೂ ಬೆಂಗಳೂರು ವರದಿಗಾರರಾಗಿ, ಬಳಿಕ ವಿಜಯ ಕರ್ನಾಟಕ ಮತ್ತು ಪುನಃ ಸಂಯುಕ್ತ ಕರ್ನಾಟಕದಲ್ಲಿ ವಿಶೇಷ ವರದಿಗಾರ ಹಾಗೂ ಕಾರ್ಯನಿರ್ವಹಕ ಸಂಪಾದಕರಾಗಿ ಮಹತ್ವದ ಜವಾಬ್ದಾರಿ ನಿಭಾಯಿಸಿದ್ದಾರೆ. 2026ರ ಅಕ್ಟೋಬರ್ 2ಕ್ಕೆ ಇವರ ಪತ್ರಿಕೋದ್ಯಮ ಸೇವೆಗೆ 50 ವರ್ಷಗಳು ಭರ್ತಿಯಾಗಲಿದ್ದು, ‘ಕರೆಂಟ್ ಮಾತು’ ಸೇರಿದಂತೆ ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಪ್ರಸ್ತುತ ಖಾದ್ರಿ ಶಾಮಣ್ಣ ಟ್ರಸ್ಟ್ ಅಧ್ಯಕ್ಷರಾಗಿ, ಐ.ಎಂ.ಎಸ್‌.ಆರ್ ಸದಸ್ಯರಾಗಿ ಹಾಗೂ ರೋಹಿತ್ ರಾಜಣ್ಣ ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹೊನ್ನಾವರದ ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ರಂಗಕರ್ಮಿ ಜಿ.ಯು.ಭಟ್ (ಗಜಾನನ ಉಮಾಮಹೇಶ್ವರ ಭಟ್) ಅವರಿಗೆ *’ಡಾ. ಯು. ಚಿತ್ತರಂಜನ್ ಪ್ರಶಸ್ತಿ’* ಲಭಿಸಿದೆ. ಈ ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಉದಯವಾಣಿ ದೈನಿಕದ ಹಿರಿಯ ವರದಿಗಾರರಾಗಿ ಸುದೀರ್ಘ 55 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಇವರು, ಸಂಯುಕ್ತ ಕರ್ನಾಟಕ, ಗ್ರಾಮ ವಿಕಾಸ, ಸಮನ್ವಯ ಹಾಗೂ ಶಿರಸಿ ಸಮಾಚಾರ ಪತ್ರಿಕೆಗಳಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. 50 ವರ್ಷಗಳಲ್ಲಿ ಜಿಲ್ಲೆಯ ಆಗುಹೋಗುಗಳ ಕುರಿತು 20,000ಕ್ಕೂ ಹೆಚ್ಚು ವರದಿಗಳು, 3,000ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದು, ಉತ್ತರ ಕನ್ನಡ ಕಥೆ-ವ್ಯಥೆ, ಕರಾವಳಿ ಸೇರಿದಂತೆ 9ಕ್ಕೂ ಹೆಚ್ಚು ಪ್ರಸಿದ್ಧ ಕೃತಿಗಳನ್ನು ಪ್ರಕಟಿಸಿದ್ದಾರೆ. ರಂಗಾಯಣ ನಿರ್ದೇಶಕರಾಗಿ, ರಂಗಭೂಮಿ ಹಾಗೂ ಚಲನಚಿತ್ರ ನಟರಾಗಿ, ಶಿಕ್ಷಣ ಮತ್ತು ಸಹಕಾರ ಕ್ಷೇತ್ರದ ಧುರೀಣರಾಗಿಯೂ ಕೊಡುಗೆ ನೀಡಿದ್ದಾರೆ. ಇವರಿಗೆ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಕೆ.ಯು.ಡಬ್ಲ್ಯೂ.ಜೆ. ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ ಮತ್ತು ವಿ. ಸೀತಾರಾಮಯ್ಯ ಮಾಧ್ಯಮ ಗೌರವ, ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ.

ಯಲ್ಲಾಪುರದ ಹಿರಿಯ ವರದಿಗಾರ ನರಸಿಂಹ ಸಾತೊಡ್ಡಿ (ನರಸಿಂಹ ವಿಶ್ವೇಶ್ವರ ಭಟ್) ಅವರು *’ಕೆ. ಶಾಮರಾವ್ ಪ್ರಶಸ್ತಿ’* ಗೆ ಆಯ್ಕೆಯಾಗಿದ್ದು, ಈ ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಬಿ.ಇಡಿ ಹಾಗೂ ಕನ್ನಡ ಎಂ.ಎ. ಪದವೀಧರರಾದ ಇವರು, 1990ರಲ್ಲಿ ಪತ್ರಿಕಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಇವರು ಹೊಸದಿಗಂತ, ಧ್ಯೇಯನಿಷ್ಠ ಪತ್ರಕರ್ತ, ಉಷಾಕಿರಣ, ವಿಜಯವಾಹಿನಿ, ಕನ್ನಡಪ್ರಭ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ, 2006 ರಿಂದ ಪ್ರಸ್ತುತ ಉದಯವಾಣಿ ಪತ್ರಿಕೆ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ರಮ ಮರ ಕಳ್ಳಸಾಗಾಣಿಕೆ, ಬಿಸಗೋಡು ಗಣಿಗಾರಿಕೆ ವಿರುದ್ಧ ಸರಣಿ ವರದಿಗಳನ್ನು ಬರೆದಿರುವ ಇವರು, ಕೊಡಸಳ್ಳಿ ಜಲವಿದ್ಯುತ್ ಯೋಜನೆ ವಿರುದ್ಧದ ಹೋರಾಟ, ಕೈಗಾ ಪಾದಯಾತ್ರೆ ಹಾಗೂ ಬೇಡ್ತಿ ಕೊಳ್ಳ ರಕ್ಷಣಾ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಿಸಾನ್ ಸಂಘದ ತಾಲೂಕು ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವ ಇವರಿಗೆ ಶ್ರೀಗಂಧ ಪ್ರಶಸ್ತಿ, ಸಂಕಲ್ಪ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

ಶಿರಸಿಯ ಭರವಸೆಯ ಯುವ ವರದಿಗಾರ ಮಂಜುನಾಥ ಈರಗೊಪ್ಪ ಅವರು *’ಜಿ.ಎಸ್. ಹೆಗಡೆ ಅಜ್ಜೀಬಳ ಪುರಸ್ಕಾರ’* ಕ್ಕೆ ಆಯ್ಕೆಯಾಗಿದ್ದಾರೆ. ಇದು 5 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. 2016ರಲ್ಲಿ ಜನಮಾಧ್ಯಮ ಪತ್ರಿಕೆ ಮೂಲಕ ಪತ್ರಿಕಾ ರಂಗ ಪ್ರವೇಶ ಮಾಡಿರುವ ಇವರು ನಂತರ ಕರಾವಳಿ ಮುಂಜಾವು, ನೂತನ ಟಿವಿಯಲ್ಲಿ ಕಾರ್ಯನಿರ್ವಹಿಸಿ ಸದ್ಯ ತತ್ತ್ವನಿಷ್ಠ ಪತ್ರಿಕೆಯ ಶಿರಸಿ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಗೋಲ್ಡನ್ ಪೆನ್ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಪತ್ರಿಕೋದ್ಯಮದಲ್ಲಿ ತೋರುತ್ತಿರುವ ಕ್ರಿಯಾಶೀಲತೆ ಮತ್ತು ಬದ್ಧತೆಯನ್ನು ಗುರುತಿಸಿ ಇವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮಂಡಳಿ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರದೀಪ ಶೆಟ್ಟಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.