ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆ ಹಚ್ಚಹಸುರಿನ ಕಾಡುಗಳಿಂದ ಕೂಡಿರುವ ಪ್ರದೇಶ. ಜಿಲ್ಲೆಯ ಯಲ್ಲಾಪುರ ತಾಲೂಕಿನ ಜನರು ಕೂಡ ಅತ್ಯಂತ ಶಾಂತ ಸ್ವಭಾವದವರು. ಆದರೆ ಇಂದು ಯಲ್ಲಾಪುರ ಪಟ್ಟಣ ದಲ್ಲಿ ಪ್ರತಿಭಟನೆ ರಸ್ತೆ ತಡೆ ನಡೆದಿದೆ.
ಇದಕ್ಕೆ ಜಿಲ್ಲೆಯ ಜನರ ತಾಳ್ಮೆ ಪರೀಕ್ಷಿಸಿರುವುದೇ ಕಾರಣ ಎಂಬಂತಾಗಿದೆ.
ಉತ್ತರ ಕನ್ನಡದಲ್ಲಿ ಜನವಿರೋಧಿ ಹಾಗೂ ಪರಿಸರಕ್ಕೆ ಮಾರಕವಾಗಿರುವ ನದಿ ತಿರುವು ಯೋಜನೆ ವಿರೋಧಿಸಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ರಸ್ತೆ ತಡೆ ಸಂಚಾಲನಾ ಸಮಿತಿ ಯಲ್ಲಾಪುರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಬೃಹತ್ ಪ್ರತಿಭಟನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆಯಿಂದ. ಯಲ್ಲಾಪುರ ತಾಲೂಕಿನ ಹಳ್ಳಿ ಹಳ್ಳಿಗಳಿಂದ ಜನರು ತಮ್ಮ ಜಿಲ್ಲೆಯ ಜೀವನದಿಯನ್ನು ಉಳಿಸಿಕೊಳ್ಳಲು ಹಾಗೂ ತಮ್ಮ ಪರಿಸರವನ್ನು ರಕ್ಷಿಸಿಕೊಳ್ಳಲು ಅಕ್ಷರಶಃ ರಸ್ತೆಗೆ ಇಳಿದು ಹೋರಾಟ ನಡೆಸಿದರು.
ಜಗತ್ತಿಗೆ ಅನ್ನ ನೀಡುವ ಕೈಗಳು ನದಿ ತಿರುವು ಬೇಡ ಎಂಬ ಬ್ಯಾನರ್ ಹಿಡಿದು ತಲೆ ಸುತ್ತುವ ಬಿಸಿಲಿನಲ್ಲೂ ಪಟ್ಟಣದ ಹೆದ್ದಾರಿಯಲ್ಲಿ ಹೆಜ್ಜೆ ಹಾಕುತ್ತಾ ಶಾಂತಿಯುತ ಪ್ರತಿಭಟನೆ ನಡೆಸುವ ದೃಶ್ಯ ಮನ ಕಲಕುವಂತಿತ್ತು. ವಯಸ್ಸಿನ ಇತಿಮಿತಿ ಇಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು 90 ವರ್ಷದ ವೃದ್ಧರೂ ಕೂಡ ಈ ಬಿರು ಬಿಸಿಲಿನಲ್ಲೂ ಪ್ರತಿಭಟನೆಗೆ ಇಳಿದಿದ್ದರು. ಉತ್ತರ ಕನ್ನಡ ಜಿಲ್ಲೆಯ ಅನ್ನದಾತರು ಯಾವತ್ತೂ ಕೂಡ ದೆಹಿ ಎಂದು ಸರ್ಕಾರವನ್ನು ಬೇಡಿದವರಲ್ಲ. ಆದರೆ ನಮ್ಮ ಜಿಲ್ಲೆಯ ಜೀವನದಿಗಳನ್ನು ನಮಗೆ ಉಳಿಸಿಕೊಡಿ ನಮ್ಮ ಹಚ್ಚಹಸುರಿನ ಕಾಡನ್ನು ಉಳಿಸಿಕೊಡಿ ಎಂದು ಪ್ರತಿಭಟನಾಕಾರರು ಹೇಳುವಾಗ ಕಣ್ಣಲ್ಲಿ ನೀರು ತುಂಬಿ ಬಂತು.
ಜನರಿಂದಲೇ ಆಯ್ಕೆಯಾಗಿರುವ ಜನನಾಯಕರು ಜನರಿಗೆ ತೊಂದರೆಯಾಗುವ ಇಂತಹ ಜನ ವಿರೋಧಿ ಹಾಗೂ ಪರಿಸರ ವಿರೋಧಿ ಯೋಜನೆಗಳನ್ನು ರೂಪಿಸುವಾಗ ಹಿಂದು ಮುಂದು ನೋಡದೆ ನದಿ ತಿರುವು ಗಳಂತಹ ನಿರ್ಧಾರ ಕೈಗೊಳ್ಳುವುದು ಅದೆಷ್ಟು ಸರಿ ಎಂಬ ಪ್ರಶ್ನೆ.. ನಮ್ಮೆಲ್ಲರನ್ನು ಕಾಡುತ್ತದೆ.
ಕಾಡಿದ್ದರೆ ಮಳೆ… ಮಳೆ ಇದ್ದರೆ ಬೆಳೆ…. ಬೆಳೆ ಇದ್ದರೆ ನಾವು…. ಹೀಗಿರುವಾಗ ಉತ್ತರ ಕನ್ನಡ ಜಿಲ್ಲೆಯನ್ನೇ ಬರಡು ಭೂಮಿ ಮಾಡಲು ಸರ್ಕಾರ ಹೊರತಂತಿದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹೋರಾಟ ಮುಂದುವರಿದಿದ್ದರೂ ಕೂಡ ಕ್ಯಾರೆ ಎನ್ನದಂತೆ ಹಂತ ಹಂತವಾಗಿ ನದಿ ತಿರುವು ಯೋಜನೆ ಸಿದ್ಧತೆ ಮುಂದುವರಿದಿದೆ.
ಉತ್ತರ ಕನ್ನಡ ಜಿಲ್ಲೆ ಈಗಾಗಲೇ ಕೈಗಾದಂತಹ ಯೋಜನೆಗಳಿಂದ ತೊಂದರೆ ಅನುಭವಿಸುತ್ತಿದೆ. ಹೀಗಿರುವಾಗ ಇದೀಗ ಮತ್ತೊಂದು ಯೋಜನೆ ನದಿ ತಿರುವು ಯೋಜನೆ, ಜನತೆಯ ನಿದ್ದೆಗಡಿಸಿದೆ. ಜಿಲ್ಲೆಗೆ ಅತ್ಯಂತ ಅಗತ್ಯವಾಗಿರುವ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡಲು ಸಾಧ್ಯವಾಗದ ಸರ್ಕಾರ ಇಂತಹ ಜನ ವಿರೋಧಿ ಯೋಜನೆ ಜಾರಿಗೆ ಮುಂದಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಹಲವು ಕೃಷಿ ಬೆಳೆಗಳು ವಿವಿಧ ರೋಗಗಳಿಂದ ನಾಶವಾಗುತ್ತಿದೆ. ಅದರಲ್ಲೂ ಅಡಿಕೆ ಬೆಳೆ ಹೆಚ್ಚಿನ ರೋಗಕ್ಕೆ ತುತ್ತಾಗಿದೆ. ಜಿಲ್ಲೆಯಲ್ಲಿ ಬೇಸಿಗೆ ಸಮಯದಲ್ಲಿ ನೀರಿನ ಅಭಾವ ಇದ್ದೇ ಇರುತ್ತದೆ. ಆದರೆ ಬೇಸಿಗೆಯಲ್ಲಿ ಜಿಲ್ಲೆಯಲ್ಲಿಯೇ ನೀರಿಲ್ಲ ಇರುವಾಗ ಇರುವ ಒಂದೆರಡು ತಂಬಿಗೆ ನೀರನ್ನು ತೆಗೆದುಕೊಂಡು ಹೋಗಲು ಸರ್ಕಾರ ಮುಂದಾಗಿದೆ.
ನದಿ ತಿರುವು ವಿರೋಧಿಸಿ ಯಲ್ಲಾಪುರದಲ್ಲಿ ಇಂದು ನಡೆದ ಹೋರಾಟದಿಂದ ಸರ್ಕಾರ ಎಚ್ಚೆತ್ತುಕೊಂಡು ಜಿಲ್ಲೆಯ ಜನರ ಜಿಲ್ಲೆಯ ರೈತರ ಕಣ್ಣೀರನ್ನು ಒರೆಸಿ ತನ್ನ ಈ ಪರಿಸರ ಮಾರಕ ಯೋಜನೆ ಕೈ ಬಿಡಲಿದೆಯೇ…? ಕಾದುನೋಡಬೇಕಿದೆ…
