ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕದ ವತಿಯಿಂದ ಜೋಯಿಡಾ ಕುಣಬಿ ಭವನದಲ್ಲಿ ನಡೆದ ಕನ್ನಡ ಉತ್ಸವ ೨೦೨೬ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಕನ್ನಡ ನೃತ್ಯ ಸಂಗೀತ ಜನಮನ ಸೊರೆಗೊಂಡಿತ್ತು.
ಪ್ರತಿವರ್ಷದಂತೆ ಈ ವರ್ಷವೂ ನವೆಂಬರ್ ೧ ರಂದು ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಸಾಯಂಕಾಲ ಕನ್ನಡ ಸಾಹಿತ್ಯ ಪರಿಷತ್ತಿನವರು ಹಮ್ಮಿಕೊಂಡಿದ್ದ ನೃತ್ಯ ಸಂಗೀತ ದ “ಕನ್ನಡ ಉತ್ಸವ”ನಡೆಯಿತು.
ಕನ್ನಡ ಸಂಸ್ಕೃತಿ, ಇತಿಹಾಸವನ್ನು ಬಿಂಬಿಸುವ ನೃತ್ಯ ರೂಪಕಗಳು, ಕರ್ನಾಟಕವನ್ನಾಳಿದ ವೀರರ ಪುರುಷರ ವೈಭವವನ್ನು ಸಾರಿದ ಕನ್ನಡ ಗೀತೋತ್ಸವ ಪ್ರೇಕ್ಷಕರ ಮನಸೆಳೆಯಿತು.
ಕಾರ್ಯಕ್ರಮವನ್ನು ತಾ.ಪಂ.ಕಾ.ನಿ.ಅಧಿಕಾರಿ ಭಾರತಿ ಎನ್. ಉದ್ಘಾಟಿಸಿದರು. ವೇದಿಕೆಯಲ್ಲಿ ಪ್ರಮುಖರಾದ ಸದಾನಂದ ದಬಗಾರ, ಶಕುಂತಲಾ ಹಿರೇಗೌಡರ, ಪಿ.ಎಮ್.ಶ್ರೀ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ಯಾಮ ಪೋಕಳೆ, ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ, ಮಾಜಿ ಗ್ರಾ.ಪಂ.ಅಧ್ಯಕ್ಷ ಸಂತೋಷ ಮಂಥೇರೋ, ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ಗ್ರಾ.ಪಂ.ಗಾಂಗೋಡಾ ಮಾಜಿ ಅಧ್ಯಕ್ಷ ಪ್ರವೀಣ ದೇಸಾಯಿ, ಕ.ರ.ವೆ.ಅಧ್ಯಕ್ಷ ಗಣೇಶ ಹೆಗಡೆ, ಮುಂತಾದವರು ಉಪಸ್ಥಿತರಿದ್ದರು.
ಕನ್ನಡ ಉತ್ಸವದಲ್ಲಿ ಮೊರಾರ್ಜಿ ಪ್ರೌಢ ಶಾಲೆ, ಶ್ರೀರಾಮ ಪ್ರೌಡಶಾಲೆ, ನ್ಯೂ ಟೌನ್ ಶಿಪ್ ಶಾಲೆ, ಪಿ.ಎಮ್.ಶ್ರೀ ಶಾಲೆ, ನಾಗರಬಾವಿ ಶಾಲೆ ಮೊದಲಾದ ಶಾಲೆ, ಸೇರಿದಂತೆ ಅಂಗನವಾಡಿ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಲ್ಲಾ ನೃತ್ಯ ಕಲಾ ತಂಡಗಳಿಗೆ ಕ.ಸಾ.ಪ. ವತಿಯಿಂದ ಬಹುಮಾನ ವಿತರಿಸಲಾಯಿತು.
ಕ.ಸಾ.ಪ.ಅಧ್ಯಕ್ಷ ಪಾಂಡುರಂಗ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿ. ಕನ್ನಡ ಉತ್ಸವಕ್ಕೆ ಸಹಕಾರ ನೀಡಿದವರನ್ನು ಸ್ಮರಿಸಿದರು. ಕಾರ್ಯದರ್ಶಿ ಪ್ರೇಮಾನಂದ ವೇಳಿಪ ಸ್ವಾಗತಿಸಿದರು. ಶಿಕ್ಷಕರ ಸಂಘದ ಅಧ್ಯಕ್ಷ ಯಶ್ವಂತ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
