ಸುದ್ದಿ ಕನ್ನಡ ವಾರ್ತೆ

ಯರಗಟ್ಟಿ: ಪಟ್ಟಣದ ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಅವರು ಪ್ರಾಧ್ಯಾಪಕ ವೃತ್ತಿಯೊಂದಿಗೆ ನಿರಂತರ ಅಧ್ಯಯನಶೀಲತೆಯನ್ನು ರೂಢಿಸಿಕೊಂಡಿದ್ದು, ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು, ಶ್ರೀ ಮಹಾಂತ ದುರದುಂಡೇಶ್ವರ ಮಠ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಶ್ರೀ ರಾಜರಾಜೇಶ್ವರಿ ಆಶ್ರಮದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ರಾಜ್ಯಾದ್ಯಂತ ನಡೆಯುವ ವಿಚಾರ ಸಂಕಿರಣ, ಕಾರ್ಯಾಗಾರ, ಸಾಹಿತ್ಯ ಸಮ್ಮೇಳನ ಹಾಗೂ ಮಠ ಮಂದಿರಗಳ ಅನುಭಾವ ಗೋಷ್ಠಿಗಳಲ್ಲಿ ವಿದ್ವತ್ಪೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ. ಇದರೊಂದಿಗೆ ಸಾಹಿತ್ಯ ಆಸ್ವಾದನೆ, ಕರಿಯು ಕನ್ನಡಿಯೊಳಗೆ, ವಚನ ಅನುಸಂಧಾನ, ಭಕ್ತಿಯಿಲ್ಲದ ಪೃಥ್ವಿಯ ಮೇಲೆ, ಸಾತಪ್ಪ ಟೋಪಣ್ಣವರ, ಕೆಂಭಾವಿ ಭೋಗಣ್ಣ ಹಾಗೂ ಸಾವಳಗಿ ಶಿವಲಿಂಗೇಶ್ವರರು ಸೇರಿದಂತೆ 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಸಾಹಿತ್ಯಕ ಸೇವೆಯನ್ನು ಪರಿಗಣಿಸಿ ಯರಗಟ್ಟಿ ತಾಲೂಕು ಆಡಳಿತದ ವತಿಯಿಂದ ಭಾನುವಾರ ಆಯೋಜಿಸಿದ 71ನೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಸಾಧನೆಗಾಗಿ ಶ್ರೀ ಮಹಾಬಳೇಶ್ವರ ಹಾದಿಮನಿ, ಜನಪದ ಗಾಯನ ಕ್ಷೇತ್ರದ ಸಾಧನೆಗಾಗಿ ಶ್ರೀ ಭೀಮಶಿ ತಡಸಲೂರು, ಸಹಕಾರ ಕ್ಷೇತ್ರದ ಸಾಧನೆಗಾಗಿ ಶ್ರೀ ಬಾಪೂಜಿ ರಾಯರ, ಹೈನುಗಾರಿಕೆ ಕ್ಷೇತ್ರದ ಸಾಧನೆಗಾಗಿ ಶ್ರೀಮತಿ ಶೈಲಕ್ಕ ಮಿಕಲಿ ಹಾಗೂ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಡಾ. ಸುನಿತಾ ಸೊಪ್ಪಡ್ಲ ಅವರನ್ನು ಸತ್ಕಾರಿಸಲಾಯಿತು.
ಯರಗಟ್ಟಿ ತಾಲೂಕು ದಂದಾಧಿಕಾರಿಗಳು ಹಾಗೂ ತಹಸೀಲ್ದಾರರಾದ ಎಂ. ವ್ಹಿ. ಗುಂಡಪ್ಪಗೋಳ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಅಯ್ಯನಗೌಡರ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಕಂದಾಯ ನಿರೀಕ್ಷಕ ವಾಯ್. ಎಫ್‌‌. ಮುರ್ತೇನವರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಎಂ. ಕಾಮಣ್ಣವರ, ಪಟ್ಟಣ ಪಂಚಾಯತ ಸದಸ್ಯರಾದ ಹನುಮಂತ ಹಾರೂಗೊಪ್ಪ, ನಿಖಿಲ ಪಾಟೀಲ, ಸಲೀಂಬೇಗ ಜಮಾದಾರ, ಪಶು ವೈದ್ಯಾಧಿಕಾರಿ ಡಾ ಎಂ. ವ್ಹಿ. ಪಾಟೀಲ, ಉಪನ್ಯಾಸಕ ಎಂ.ಡಿ. ಸರದಾರ, ಸೇರಿದಂತೆ ಇತರರು ಇದ್ದರು.