ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ರಾಜ್ಯ ಸರಕಾರ ಉತ್ತರ ಕನ್ನಡ ಜಿಲ್ಲೆಯನ್ನು ಸಂಪೂರ್ಣವಾಗಿ ಅವಗಣನೆ ಮಾಡಿದ್ದು ಯಾಕೆ?
ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ ರಾಜ್ಯದ 71 ಜನರಿಗೆ ಸಾಧಕರಿಗೆ ಪ್ರಶಸ್ತಿ ನೀಡಿದೆ. ಆದರೆ ಈ ಪ್ರಶಸ್ತಿ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಾವುದೇ ಒಬ್ಬ ಸಾಧಕರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡದಿರುವುದು ಖಂಡನೀಯ. ಜಿಲ್ಲೆಯ ಸಾಧಕರನ್ನು ಗುರುತಿಸದಿರುವುದುಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷವೋ ಅಥವಾ ಉತ್ತರ ಕನ್ನಡ ಜಿಲ್ಲೆಯ ಅವಗಣನೆಯೂ ಹೇಗೆ ? ಎಲ್ಲಾ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿರುವ ಸಾಧಕರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರೂ ಸಹ ಯಾರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಪರಿಗಣಿಸದೆ ಇರುವುದು ಉತ್ತರ ಕನ್ನಡವನ್ನು ರಾಜ್ಯ ಕಾಂಗ್ರೆಸ್ ಸರಕಾರ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದು ಕಂಡುಬರುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಸದಾನಂದ ಭಟ್ ಅಭಿಪ್ರಾಯ ಪಟ್ಟಿದ್ದಾರೆ.

ಇದು ನಿಜಕ್ಕೂ ದೌರ್ಭಾಗ್ಯವೇ ಸರಿ. ರಾಜ್ಯ ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ವಿಚಾರದಲ್ಲಿ ಎಲ್ಲಾ ರೀತಿಯಲ್ಲಿ ದಿವ್ಯ ನಿರ್ಲಕ್ಷ ಮಾಡಿ ಮಲತಾಯಿ ಧೋರಣೆ ತೋರುತ್ತಿರುವುದು ಉತ್ತರ ಕನ್ನಡ ಜಿಲ್ಲೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ರೀತಿ ನೋಡುತ್ತಿದೆ ಎನ್ನುವುದರ ಉದಾಹರಣೆಯಾಗಿದೆ. ಬೇಡದ ಯೋಜನೆಗಳಿಗೆ ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್ಸಿಗೆ ಬೇಕು ಆದರೆ ಜಿಲ್ಲೆಗೆ ಅಭಿವೃದ್ಧಿ-ಗೌರವ ನೀಡುವಾಗ ಉತ್ತರ ಕನ್ನಡ ಜಿಲ್ಲೆಯ ಅಲಕ್ಷ ಯಾಕೆ? ಜಿಲ್ಲೆಯವರೇ ಯಾರು ಸಚಿವ ಸ್ಥಾನದಲ್ಲಿ ಇಲ್ಲದೆ ಇರುವುದು ಇದಕ್ಕೆ ಕಾರಣವೋ ಹೇಗೆ?
ಪ್ರಶಸ್ತಿ ಪಟ್ಟಿಯಲ್ಲಿ ಬೇರೆ ಜಿಲ್ಲೆಯ ಸಾಧಕರನ್ನು ಉತ್ತರ ಕನ್ನಡದ ಹೆಸರಿನಲ್ಲಿ ಸೇರಿಸಿರುವುದು ಯಾಕೆ?
ಸಮೃದ್ಧ ಸಾಧಕರ ಉತ್ತರ ಕನ್ನಡವನ್ನು ರಾಜ್ಯ ಕಾಂಗ್ರೆಸ್ ಸರಕಾರ ಯಾಕೆ ನಿರ್ಲಕ್ಷಿಸುತ್ತಿದೆ ಎನ್ನುವುದನ್ನು ಜನರಿಗೆ ತಿಳಿಸಲಿ.

ಸದಾನಂದ ಭಟ್ ಬಿಜೆಪಿ ಜಿಲ್ಲಾ ವಕ್ತಾರರು ಉತ್ತರ ಕನ್ನಡ