ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅಭೂತಪೂರ್ವ ವಿಜಯ ಸಾಧಿಸಿರುವುದು ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸೋಲನುಭವಿಸಿರುವುದು ರಾಜ್ಯ ರಾಜಕಾರಣದ ದಿಕ್ಸೂಚಿ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಅಭಿಪ್ರಾಯಪಟ್ಟಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರ,ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರವನ್ನು ಬಿಜೆಪಿ ಉಳಿಸುಕೊಂಡಿದೆ,ಅಷ್ಟು ಮಾತ್ರವಲ್ಲ ಮತಗಳಿಕೆ ಪ್ರಮಾಣವನ್ನು ಬಿಜೆಪಿ ಹೆಚ್ಚಿಸಿಕೊಂಡಿದೆ. ಬೆಂಗಳೂರು ಶಿಕ್ಷಕ ಕ್ಷೇತ್ರವನ್ನು ಕಾಂಗ್ರೆಸ್ ನಿಂದ ಬಿಜೆಪಿ ನೇತೃತ್ವದ
ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಗೆದ್ದುಕೊಂಡಿರುವುದು ಪ್ರಜ್ಞಾವಂತ ಮತದಾರರು ಕಾಂಗ್ರೇಸ್ ಪಕ್ಷವನ್ನು ಸ್ಪಷ್ಟವಾಗಿ ತಿರಸ್ಕರಿಸಿರುವುದರ ಸಂಕೇತ ಎಂದು ಹರಿಪ್ರಕಾಶ ಕೋಣೆಮನೆ ವಿಶ್ಲೇಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಹೊಸ ಶಾಲಾ ಕೊಠಡಿ ನಿರ್ಮಾಣ ಮಾಡಲಾಗಿಲ್ಲ,ಒಬ್ಬನೇ ಒಬ್ಬ ಹೊಸ ಶಿಕ್ಷಕರ ನೇಮಕಾತಿ ಆಗಿಲ್ಲ. ಪದವೀಧರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಅವಕಾಶ ಸೃಷ್ಟಿ ಮಾಡುವ ಭರವಸೆ ಹುಸಿಯಾಗಿದೆ. ಈ ಎಲ್ಲ ಕಾರಣಗಳಿಂದ ಪದವೀಧರ ಮತದಾರರು ಮತ್ತು ಶಿಕ್ಷಕರು ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆಂದು ಹರಿಪ್ರಕಾಶ ಕೋಣೆಮನೆ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ಸರಕಾರದಲ್ಲಿ ಗುಂಪುಗಾರಿಕೆ ಮಿತಿಮೀರಿದೆ. ರಾಜ್ಯದ ಬೊಕ್ಕಸ ಬರಿದಾಗಿದೆ ಎಂದು ಹಣಕಾಸು ಇಲಾಖೆ ಮಾತ್ರವಲ್ಲ ಸ್ವತಃ ಮುಖ್ಯಮಂತ್ರಿ ಮೇಲಿಂದ ಮೇಲೆ ಹೇಳುತ್ತಿರುವುದು ರಾಜ್ಯದ ಪ್ರಜ್ಞಾವಂತ ನಾಗರಿಕರನ್ನು ಚಿಂತೆಗೀಡು ಮಾಡಿದೆ,ಈ ಎಲ್ಲ ಕಾರಣಗಳಿಂದ ರಾಜ್ಯದ ಜನರು ಕಾಂಗ್ರೆಸ್ ದುರಾಡಳಿತ ಕೊನೆಗಾಣಿ ಸಲು ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಮತದಾರರಿಗೆ,ಪಕ್ಷದ ಕಾರ್ಯಕರ್ತರಿಗೆ ಮತ್ತು ಗೆಲುವು ಸಾಧಿಸಿದ ಅಭ್ಯರ್ಥಿಗಳಿಗ ಅಭಿನಂದನೆ ಸಲ್ಲಿಸಿದ್ದಾರೆ.
ಬಾಲೆಟ್ ಪೇಪರ್ ನಲ್ಲೂ ಕಾಂಗ್ರೆಸ್ ಸೋಲು;
ಕಾಂಗ್ರೆಸ್ ಸೋಲಿಗೆ ಇವಿಎಂ ಕಾರಣ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರು ವಿಧಾನ ಪರಿಷತ್ ಚುನಾವಣಾ ಫಲಿತಾಂಶದ ಬಗ್ಗೆ ಏನು ಹೇಳುತ್ತಾರೆ?
ಬಾಲೆಟ್ ಪೇಪರಲ್ಲೂ ಕಾಂಗ್ರೆಸ್ ಸೋತಿದೆಯಲ್ಲ?
ಕಾಂಗ್ರೆಸ್ ತನ್ನ ಸೋಲಿನ ಇತಿಹಾಸದ ಬಗ್ಗೆ ಪ್ರಾಮಾಣಿಕ ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯ ಎಂದು ಹರಿಪ್ರಕಾಶ ಕೋಣೆಮನೆ ಹೇಳಿದ್ದಾರೆ.
