ಸುದ್ದಿ ಕನ್ನಡ ವಾರ್ತೆ

ಜೋಯಿಡಾ, ಕಸ್ತೂರಿರಂಗನ್ ವರದಿ ಆಧರಿಸಿ ಹೊರಡಿಸಿರುವ ಪರಿಸರ ಸೂಕ್ಷ್ಮ ವಲಯ (ಇಎಸ್‌ಎ) ಕರಡು ಅಧಿಸೂಚನೆ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆ (ಇಎಸ್‌ಝಡ್) ವಿರೋಧಿಸಿ, ಅವುಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಕಾಳಿ ಬ್ರಿಗೇಡ್ ನೇತೃತ್ವದಲ್ಲಿ ಶನಿವಾರ ಜೋಯಿಡಾದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಜೋಯಿಡಾದ ಶಿವಾಜಿ ಸರ್ಕಲ್‌ನಲ್ಲಿ ಬೆಳಿಗ್ಗೆ ಪ್ರತಿಭಟನಾಕಾರರು ಸಮಾವೇಶಗೊಂಡು, ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಜೋಯಿಡಾ ತಾಲ್ಲೂಕಿನ ಪರಿಸರ, ಜನಜೀವನ ಹಾಗೂ ಸ್ಥಳೀಯರ ಹಕ್ಕುಗಳಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಮುಖಂಡರು ಮಾತನಾಡಿದರು.

ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನೀಲ್ ದೇಸಾಯಿ ಮಾತನಾಡಿ, ಕಸ್ತೂರಿರಂಗನ್ ವರದಿಯ ಆಧಾರದ ಪರಿಸರ ಸೂಕ್ಷ್ಮ ವಲಯ (ಇಎಸ್‌ಎ) ಕರಡು ಅಧಿಸೂಚನೆ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯ ಸ್ವರೂಪ, ಉದ್ದೇಶ ಮತ್ತು ಅವುಗಳ ನಡುವಿನ ವ್ಯತ್ಯಾಸದ ಕುರಿತು ಸವಿಸ್ತಾರವಾಗಿ ವಿವರಿಸಿದರು. ಜೋಯಿಡಾ ತಾಲ್ಲೂಕಿನ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸದೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಅವರು ಒತ್ತಾಯಿಸಿದರು.

ಗ್ರಾಮಸಭೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಬೇಕು

ಕಾಳಿ ಬ್ರಿಗೇಡ್ ಮಾಜಿ ಮುಖ್ಯ ಸಂಚಾಲಕ ರವಿ ರೇಡಕರ್ ಮಾತನಾಡಿ, ಜೋಯಿಡಾ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ವಿವಿಧ ಚಟುವಟಿಕೆಗಳಿಂದ ಹಿಂದಿನಿಂದಲೂ ಅರಣ್ಯ ಹಾಗೂ ಸ್ಥಳೀಯ ಜನಜೀವನದ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಉದಾಹರಣೆಗಳ ಮೂಲಕ ವಿವರಿಸಿದರು.

ತಾಲ್ಲೂಕಿನಲ್ಲಿ ಯಾವುದೇ ಹೊಸ ಅಧಿಸೂಚನೆ ಅಥವಾ ನಿರ್ಬಂಧ ಜಾರಿಗೆ ತರುವ ಮುನ್ನ ಗ್ರಾಮಸಭೆಗಳನ್ನು ನಡೆಸಿ ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಬೇಕು. ಕರಡು ಅಧಿಸೂಚನೆಯನ್ನು ಜನರಿಗೆ ಅರ್ಥವಾಗುವಂತೆ ಕನ್ನಡ ಭಾಷೆಯಲ್ಲಿ ಪ್ರಕಟಿಸಿ, ಅದರ ಪ್ರತಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಅಧಿಸೂಚನೆ ರದ್ದತಿಗೆ ಆಗ್ರಹ

ಪ್ರತಿಭಟನಾಕಾರರನ್ನು ಉದ್ದೇಶಿಸಿ ಸುನೀಲ್ ದೇಸಾಯಿ, ರವಿ ರೇಡಕರ್, ವ್ಯಾಪಾರಸ್ಥರ ಸಂಘದ ಮಾಜಿ ಅಧ್ಯಕ್ಷ ರಫೀಕ್ ಖಾಜಿ, ಕುಣಬಿ ಸಮಾಜದ ಅಧ್ಯಕ್ಷ ಪ್ರೇಮಾನಂದ ವೇಳಿಪ್, ಗೋಪಾಲ್ ಭಟ್ಟ್, ಸುಭಾಸ್ ಗಾವಡಾ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಜೀತ್ ಥೋರವಥ, ಬಿಜೆಪಿಯ ಅರುಣ ಕಾಮರೇಕರ ಹಾಗೂ ದತ್ತಾರಾಮ ದೇಸಾಯಿ ಸೇರಿದಂತೆ ವಿವಿಧ ಮುಖಂಡರು ಮಾತನಾಡಿದರು.

ಭಾಷಣಗಳ ಸಂದರ್ಭದಲ್ಲಿ ಜೋಯಿಡಾ ತಾಲ್ಲೂಕಿನ ಭೌಗೋಳಿಕ ಪರಿಸ್ಥಿತಿ, ಅರಣ್ಯ ಅವಲಂಬಿತ ಜನಜೀವನ, ಕೃಷಿ, ಉದ್ಯೋಗ ಹಾಗೂ ಮೂಲಭೂತ ಸೌಕರ್ಯಗಳ ಅಗತ್ಯತೆಗಳನ್ನು ಪರಿಗಣಿಸಿ ಪರಿಸರ ಸಂರಕ್ಷಣೆ ಹಾಗೂ ಜನಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.

ಶಿವಾಜಿ ಸರ್ಕಲ್‌ನಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ

ಪ್ರತಿಭಟನಾ ಸಭೆಯ ಬಳಿಕ ಪ್ರತಿಭಟನಾಕಾರರು ಶಿವಾಜಿ ಸರ್ಕಲ್‌ನಿಂದ ಮೆರವಣಿಗೆಯಲ್ಲಿ ಸಾಗುತ್ತಾ ತಹಶೀಲ್ದಾರ್ ಕಚೇರಿಗೆ ತೆರಳಿದರು. ಮೆರವಣಿಗೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಸ್ತೂರಿರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಿ, ಅಧಿಸೂಚನೆಯನ್ನು ರದ್ದುಪಡಿಸುವಂತೆ ಘೋಷಣೆಗಳನ್ನು ಕೂಗಿದರು.

ನಂತರ ತಹಶೀಲ್ದಾರ್ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜೋಯಿಡಾ ತಾಲ್ಲೂಕಿನ ಜನರ ಸಮಸ್ಯೆಗಳನ್ನು ಪರಿಗಣಿಸಿ ಕಸ್ತೂರಿರಂಗನ್ ವರದಿ ಆಧಾರಿತ ಇಎಸ್‌ಎ ಕರಡು ಅಧಿಸೂಚನೆಯನ್ನು ರದ್ದುಪಡಿಸಬೇಕು ಹಾಗೂ ಸ್ಥಳೀಯ ಜನರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಾವಿರಾರು ಜನರ ಉಪಸ್ಥಿತಿ

ಪ್ರತಿಭಟನೆಯಲ್ಲಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುಧಾಕರ್ ದೇಸಾಯಿ, ಕೆ.ಎಲ್. ನಾಯ್ಕ್, ಶ್ರೀಕಾಂತ ಟೆಂಗ್ಸೆ, ಶಾಮ್ ಪೋಕಳೆ, ಕಾರ್ಯದರ್ಶಿ ದಯಾನಂದ, ಪ್ರಸನ್ನ ಗಾವಡಾ, ಕಾಂಗ್ರೆಸ್ ಧುರೀಣ ವಿನಯ ದೇಸಾಯಿ, ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಕಾರ್ಯದರ್ಶಿ ಸುದರ್ಶನ ಹೆಗಡೆ, ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಅಜಿತ್ ಗಾವಡಾ, ಕಾಳಿ ಬ್ರಿಗೇಡ್ ಮುಖ್ಯ ಸಮಿತಿ ಅಧ್ಯಕ್ಷ ಸತೀಶ ನಾಯ್ಕ್, ಕಾರ್ಯದರ್ಶಿ ಸಮೀರ್ ಮುಜಾವರ್, ಕಿರಣ ನಾಯ್ಕ್, ದಿನೇಶ ದೇಸಾಯಿ, ಸಂಜೀವನಿ ಸೇವಾ ಟ್ರಸ್ಟ್‌ನ ಖಜಾಂಚಿ ಪ್ರಭಾಕರ್ ನಾಯ್ಕ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಮೇಶ ನಾಯ್ಕ್, ಕೆಡಿಸಿಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಾ ದೇಸಾಯಿ, ಗಿರೀಶ ನಾಯ್ಕ್ ಜಗಲಬೇಟ, ದಿಗಂಬರ ದೇಸಾಯಿ, ಮಂಗೇಶ ಕಾಮತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಇಎಸ್‌ಎ ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸಿದರು.

ಅಂಗಡಿಗಳು ಸಂಪೂರ್ಣ ಬಂದ್.

ಉಮೇಶ್ ವೇಳಿಪ್ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು.

ಜೋಯಿಡಾ ತಾಲ್ಲೂಕಿನ ಜನರ ಜೀವನೋಪಾಯ, ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಸ್ಥಳೀಯ ವಾಸ್ತವಾಂಶಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂಬ ಆಗ್ರಹ ಪ್ರತಿಭಟನೆಯಲ್ಲಿ ಪ್ರಮುಖವಾಗಿ ಕೇಳಿಬಂದಿತು.