ಸುದ್ದಿ ಕನ್ನಡ ವಾರ್ತೆ

ಶಿರಸಿ: ಈಗಾಗಲೇ ಜಿಲ್ಲೆಯ ಶೇ.80ರಷ್ಟು ಭೂಭಾಗ ಅರಣ್ಯದಿಂದ ಆವೃತವಾಗಿದ್ದು, ಸಾವಿರಾರು ಕುಟುಂಬಗಳು ಭೂಮಿ ಹಕ್ಕಿಗಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ, ಮೇಕೆದಾಟು ಯೋಜನೆಗೆ ಅರಣ್ಯ ಭೂಮಿಗೆ ಪರ್ಯಾಯವಾಗಿ ಉತ್ತರಕನ್ನಡ ಜಿಲ್ಲೆಯ ಕಂದಾಯ ಭೂಮಿಯನ್ನು ನೀಡಲು ಸರ್ಕಾರ ಮುಂದಾಗಿರುವುದು ಖಂಡನಾರ್ಹ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಮೇಕೆದಾಟು ಯೋಜನೆಗಾಗಿ ಅರಣ್ಯ ಭೂಮಿ ಬಳಕೆಯಾಗುವುದಕ್ಕೆ ಪರ್ಯಾಯವಾಗಿ ಕಂದಾಯ ಭೂಮಿ ನೀಡುವ ಪ್ರಕ್ರಿಯೆಯನ್ನು ಸರ್ಕಾರ ವಿವಿಧ ಜಿಲ್ಲೆಗಳಲ್ಲಿ ಆರಂಭಿಸಿದೆ. ಅದರ ಭಾಗವಾಗಿ ಉತ್ತರಕನ್ನಡ ಜಿಲ್ಲೆಯಲ್ಲಿರುವ ಉಳಿದಿರುವ ಕಂದಾಯ ಭೂಮಿಯನ್ನೂ ಅರಣ್ಯಕ್ಕೆ ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿರುವುದು ಜಿಲ್ಲೆಯ ಭವಿಷ್ಯದ ಭೂಮಿ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಜಿಲ್ಲೆಯ 1,513 ಅರಣ್ಯವಾಸಿಗಳ 1978ರ ಪೂರ್ವದ ಹಕ್ಕು ಸೇರಿದಂತೆ ಸಾವಿರಾರು ಹಂಗಾಮಿ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡಲು ಪರ್ಯಾಯ ಕಂದಾಯ ಭೂಮಿ ಒದಗಿಸಲು ವಿಫಲವಾಗಿರುವ ಜಿಲ್ಲಾಡಳಿತ, ಬೇರೆ ಜಿಲ್ಲೆಯ ಯೋಜನೆಗಾಗಿ ಕಂದಾಯ ಭೂಮಿಯನ್ನು ಅರಣ್ಯಕ್ಕೆ ಪರ್ಯಾಯವಾಗಿ ನೀಡಲು ಮುಂದಾಗಿರುವುದು ವಿಪರ್ಯಾಸ ಎಂದು ರವೀಂದ್ರ ನಾಯ್ಕ ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿ 84 ಸಾವಿರಕ್ಕೂ ಅಧಿಕ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗುವ ಪರಿಸ್ಥಿತಿ ಇದೆ. ಇವರಿಗೆ ಹಕ್ಕುಪತ್ರ ನೀಡಲು ಬಳಸಬಹುದಾದ ಕಂದಾಯ ಭೂಮಿಯನ್ನು ಬೇರೆ ಯೋಜನೆಯ ಕಾರಣಕ್ಕೆ ಅರಣ್ಯಕ್ಕೆ ವರ್ಗಾಯಿಸುವುದು ಯಾವ ನ್ಯಾಯ? ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನು ಮೇಕೆದಾಟು ಯೋಜನೆಯಿಂದ ಸುಮಾರು 12 ಸಾವಿರ ಎಕರೆ ಅರಣ್ಯ ಪ್ರದೇಶಕ್ಕೆ ಹಾನಿಯಾಗುವ ಹಿನ್ನೆಲೆಯಲ್ಲಿ ಅಷ್ಟೇ ಪ್ರಮಾಣದ ಪರ್ಯಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರಾಮನಗರ, ಮಂಡ್ಯ, ಚಾಮರಾಜನಗರ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅರಣ್ಯಕ್ಕೆ ಪರ್ಯಾಯವಾಗಿ ‘ಸಿ’ ಮತ್ತು ‘ಡಿ’ ದರ್ಜೆಯ ಕಂದಾಯ ಭೂಮಿಯನ್ನು ವರ್ಗಾಯಿಸುವ ಪ್ರಕ್ರಿಯೆ ಆರಂಭವಾಗಿದೆ. ಇದೀಗ ಈಗಾಗಲೇ ಶೇ.80ರಷ್ಟು ಅರಣ್ಯ ಪ್ರದೇಶ ಹೊಂದಿರುವ ಉತ್ತರಕನ್ನಡ ಜಿಲ್ಲೆಯ ಕಂದಾಯ ಭೂಮಿಯನ್ನೂ ಅರಣ್ಯಕ್ಕೆ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಿರುವುದು ಜಿಲ್ಲೆಯ ಭೂಮಿ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಸುಮಾರು 9,000 ಕೋಟಿ ವೆಚ್ಚದ ಮೇಕೆದಾಟು ಅಣೆಕಟ್ಟು ಯೋಜನೆಯ ಪರಿಷ್ಕೃತ ಡಿಪಿಆರ್‌ನಲ್ಲಿ ಕರ್ನಾಟಕ ವ್ಯಾಪ್ತಿಯಲ್ಲಿ ಸುಮಾರು 8.90 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ ಎಂಬ ಉಲ್ಲೇಖವಿದೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಯೋಜನೆಗಾಗಿ ಅರಣ್ಯ ಭೂಮಿಗೆ ಪರ್ಯಾಯವಾಗಿ ವಿವಿಧ ಜಿಲ್ಲೆಗಳಿಂದ ಸುಮಾರು 12.6 ಸಾವಿರ ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಈ ಪ್ರಕ್ರಿಯೆಯಲ್ಲಿ ಉತ್ತರಕನ್ನಡದ ಭೂಮಿಯನ್ನೂ ಬಳಸಿಕೊಳ್ಳುವುದು ಜಿಲ್ಲೆಯ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿನ ಅರಣ್ಯವಾಸಿಗಳು, ಹಂಗಾಮಿ ಸಾಗುವಳಿದಾರರು ಹಾಗೂ 1978ರ ಪೂರ್ವದ ಅರಣ್ಯವಾಸಿಗಳ ಭೂಮಿ ಹಕ್ಕಿನ ಪ್ರಶ್ನೆ ಇನ್ನೂ ಇತ್ಯರ್ಥವಾಗಿಲ್ಲ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಸೀಮಿತ ಕಂದಾಯ ಭೂಮಿಯನ್ನು ಬೇರೆ ಜಿಲ್ಲೆಯ ಯೋಜನೆಗಾಗಿ ಅರಣ್ಯಕ್ಕೆ ವರ್ಗಾಯಿಸುವ ಮೊದಲು ಜಿಲ್ಲೆಯ ಭೂಮಿ ಸಮಸ್ಯೆಯನ್ನು ಸರ್ಕಾರ ಪರಿಹರಿಸಬೇಕು ಎಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
ಮೇಕೆದಾಟು ಯೋಜನೆಯ ಸಾಧಕ-ಬಾಧಕಗಳ ಕುರಿತು ತಮ್ಮ ವೇದಿಕೆ ಚರ್ಚಿಸುತ್ತಿಲ್ಲ. ಆದರೆ ಯೋಜನೆಗಾಗಿ ಪರ್ಯಾಯ ಭೂಮಿ ಒದಗಿಸುವ ನೆಪದಲ್ಲಿ ಉತ್ತರಕನ್ನಡದ ಜನರಿಗೆ ಲಭ್ಯವಿರುವ ಕಂದಾಯ ಭೂಮಿಯನ್ನು ಅರಣ್ಯಕ್ಕೆ ವರ್ಗಾಯಿಸುವುದನ್ನು ಮಾತ್ರ ತೀವ್ರವಾಗಿ ವಿರೋಧಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೇರೆ ಜಿಲ್ಲೆಯ ಯೋಜನೆಗಾಗಿ ಉತ್ತರಕನ್ನಡ ಜಿಲ್ಲೆಯ ಕಂದಾಯ ಭೂಮಿಯನ್ನು ಅರಣ್ಯ ಭೂಮಿಗೆ ಪರ್ಯಾಯವಾಗಿ ನೀಡುವ ಪ್ರಸ್ತಾವನೆಯನ್ನು ಜಿಲ್ಲಾಡಳಿತ ನೇರವಾಗಿ ತಿರಸ್ಕರಿಸಬೇಕು.

ಈಗಾಗಲೇ ಭೌಗೋಳಿಕವಾಗಿ ಶೇ.80ರಷ್ಟು ಪ್ರದೇಶ ಅರಣ್ಯ ಹೊಂದಿರುವ ಉತ್ತರಕನ್ನಡದಲ್ಲಿ ಉಳಿದಿರುವ ಕಂದಾಯ ಭೂಮಿಯನ್ನೂ ಅರಣ್ಯಕ್ಕೆ ವರ್ಗಾಯಿಸಿ ಅರಣ್ಯ ಪ್ರಮಾಣ ಹೆಚ್ಚಿಸುವ ಪ್ರಯತ್ನ ನಡೆಯುತ್ತಿರುವುದು ಆಶ್ಚರ್ಯಕರ. ಒಂದೆಡೆ ಜಿಲ್ಲೆಯ ಜನರಿಗೆ ಭೂಮಿ ಹಕ್ಕು ನೀಡಲು ಸರ್ಕಾರದ ಬಳಿ ಪರ್ಯಾಯ ಭೂಮಿ ಇಲ್ಲ ಎನ್ನಲಾಗುತ್ತದೆ; ಮತ್ತೊಂದೆಡೆ ಬೇರೆ ಜಿಲ್ಲೆಯ ಯೋಜನೆಗೆ ಅದೇ ಕಂದಾಯ ಭೂಮಿಯನ್ನು ಅರಣ್ಯಕ್ಕೆ ನೀಡಲು ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ದ್ವಂದ್ವ ನೀತಿಯನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.