ಸುದ್ದಿ ಕನ್ನಡ ವಾರ್ತೆ
ಮೋಕಿ (ಚೀನಾ): ಚೀನಾದ ಮೋಕಿಯಲ್ಲಿ ನಡೆದ ಮಹಿಳೆಯರ ಮತ್ತು ಪುರುಷರ ಜೂನಿಯರ್ ಹಾಕಿ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ರವಿವಾರ ಎರಡೂ ವಿಭಾಗಗಳಲ್ಲಿ ಭಾರತ ಸತತ ಮೂರನೇ ಬಾರಿಗೆ ಪ್ರಶಸ್ತಿಗಳನ್ನು ಜಯಿಸಿದೆ.
ಮಹಿಳೆಯರ ವಿಭಾಗದ ಫೈನಲ್ನಲ್ಲಿ ಭಾರತ ಚೀನಾವನ್ನು 1-0 ಗೋಲಿನಿಂದ ಸೋಲಿಸಿ ಪ್ರಶಸ್ತಿ ಜಯಿಸಿತು.
ಪಂದ್ಯದ ಏಕೈಕ ಗೋಲನ್ನು ಭಾರತದ ಸನಿಕಾ ಮಾಣೆ 17ನೇ ನಿಮಿಷದಲ್ಲಿ ಬಾರಿಸಿದರು. ಈ ಪ್ರಶಸ್ತಿಯೊಂದಿಗೆ, ಭಾರತವು ಮುಂದಿನ ವರ್ಷ ನಡೆಯಲಿರುವ ಎಫ್ಐಎಚ್ ಜೂನಿಯರ್ ಮಹಿಳಾ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ.ಪುರುಷರ ವಿಭಾಗದ ಫೈನಲ್ನಲ್ಲಿ ಭಾರತವು ದಕ್ಷಿಣ ಕೊರಿಯಾವನ್ನು 4-1 ಗೋಲುಗಳ ಅಂತರದಿಂದ ಸೋಲಿಸಿ ಸತತ ಮೂರನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಈ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡವು ಮುಂದಿನ ವರ್ಷ ನಡೆಯಲಿರುವ ಎಫ್ಐಎಚ್ ಪುರುಷರ ಜೂನಿಯರ್ ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಪಂದ್ಯದ ಮೊದಲ ಕ್ವಾರ್ಟರ್ನಲ್ಲಿ ಭಾರತದ ನಾಯಕ ಅನ್ಮೋಲ್ ಎಕ್ಕಾ ಮತ್ತು ಅಜಿತ್ ಯಾದವ್ ತಲಾ ಒಂದು ಗೋಲು ಗಳಿಸಿದರೆ, ಎರಡನೇ ಕ್ವಾರ್ಟರ್ನಲ್ಲಿ ಪ್ರಭ್ಪ್ರೀತ್ ಸಿಂಗ್ ಮತ್ತೊಂದು ಗೋಲು ಸೇರಿಸಿ ಮುನ್ನಡೆಯನ್ನು ಹೆಚ್ಚಿಸಿದರು.
ಬಳಿಕ 50ನೇ ನಿಮಿಷದಲ್ಲಿ ಆಶು ಮೌರ್ಯ ಗಳಿಸಿದ ಗೋಲು ಭಾರತದ ಗೆಲುವನ್ನು ಖಚಿತಪಡಿಸಿತು. ಇದಾದ ನಾಲ್ಕು ನಿಮಿಷಗಳ ನಂತರ ಕೊರಿಯಾ ತಂಡದ ನಾಯಕ ಲೀ ಮಿನ್ಹ್ಯಕ್ ಒಂದು ಸಮಾಧಾನಕರ ಗೋಲು ಬಾರಿಸಿದರು.
