ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ನಂದಿಗದ್ದೆಯ ಸಾರ್ವಜನಿಕ ಶ್ರೀ ಗಜಾನನೋತ್ಸವ ಸಮಿತಿಯು ತನ್ನ 50ನೇ ವರ್ಷದ ‘ಸುವರ್ಣ ಮಹೋತ್ಸವ’ವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. 1977ರಲ್ಲಿ ಶ್ರೀ ಡಿ.ಆರ್. ಭಟ್ಟ ಹಾಗೂ ಊರಿನ ಪ್ರಮುಖರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಗೊಂಡ ಈ ಉತ್ಸವವು ಇದೀಗ 50ರ ಸಂಭ್ರಮದಲ್ಲಿದ್ದು, ಸೆಪ್ಟೆಂಬರ್ 14 ರಿಂದ 16 ರವರೆಗೆ ಮೂರು ದಿನಗಳ ಕಾಲ ನಂದಿಗದ್ದೆಯ ಬಯಲು ರಂಗಮಂದಿರದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಲಿದೆ.
ಮೂರು ದಿನಗಳ ಕಾರ್ಯಕ್ರಮಗಳ ವಿವರ
* ಸೆಪ್ಟೆಂಬರ್ 14 (ಸೋಮವಾರ):
* ಬೆಳಿಗ್ಗೆ 11:00 ಗಂಟೆಗೆ ಶ್ರೀ ಮಹಾಗಣಪತಿ ಮೂರ್ತಿ ಪ್ರತಿಷ್ಠಾಪನೆ, ಪೂಜೆ ಹಾಗೂ ಪ್ರಸಾದ ವಿತರಣೆ.
* ಸಂಜೆ 5:30 ರಿಂದ ನಂದಾದೀಪ ಯುವತಿ ಮಂಡಳಿ, ಬನಶಂಕರಿ ಮಹಿಳಾ ಮಂಡಳಿ ಹಾಗೂ ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ.
* ಸೆಪ್ಟೆಂಬರ್ 15 (ಮಂಗಳವಾರ):
* ಬೆಳಿಗ್ಗೆ 8:30 ರಿಂದ ಗಾಯತ್ರಿ ಜಪಾನುಷ್ಠಾನ, 108 ಅಥರ್ವಶೀರ್ಷ ಪಾರಾಯಣ ಹಾಗೂ ಅಥರ್ವಶೀರ್ಷ ಹವನ.
* ಮಧ್ಯಾಹ್ನ ಅನ್ನಸಂತರ್ಪಣೆ.
* ಸಂಜೆ 4:00 ರಿಂದ ಶಿರಸಿಯ ಹರಿಕಥಾ ಶಿರೋಮಣಿ ಶ್ರೀ ನಾರಾಯಣ ದಾಸರಿಂದ ಕೀರ್ತನೆ, ನಂತರ ‘ದ್ರೌಪದಿ ಪ್ರತಾಪ’ ತಾಳಮದ್ದಳೆ.
* ರಾತ್ರಿ 10:00 ಗಂಟೆಗೆ ನಂದಿಗದ್ದೆ ಗೆಳೆಯರ ಬಳಗದಿಂದ ‘ಸಿಡಿದೆದ್ದ ನಾರಿ ಬಿದ್ದಳು ಜಾರಿ (ಸೇಡಿನ ಜ್ವಾಲೆ)’ ನಾಟಕ ಪ್ರದರ್ಶನ.
* ಸೆಪ್ಟೆಂಬರ್ 16 (ಬುಧವಾರ):
* ಬೆಳಿಗ್ಗೆ 8:30 ರಿಂದ ವೇ|| ಪ್ರಸನ್ನ ಆರ್. ಭಟ್ಟ ಹಾಗೂ ವೈದಿಕ ಬಳಗದ ನೇತೃತ್ವದಲ್ಲಿ 108 ಕಾಯಿ ಗಣಹವನ ಮತ್ತು ಸತ್ಯಗಣಪತಿ ಪೂಜೆ.
* ಮಧ್ಯಾಹ್ನ 1:30 ಕ್ಕೆ ಮಹಾಮಂಗಳಾರತಿ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ.
* ಸಂಜೆ ಸಂಗೀತ ಕಾರ್ಯಕ್ರಮ, ಭರತನಾಟ್ಯ ಹಾಗೂ ದಾಂಡೇಲಿಯ ಸಂಸ್ಕಾರ ಸಾಕಾರ ಭಾರತಿ ನೃತ್ಯ ಕಲಾ ಕೇಂದ್ರದಿಂದ ಸಾಂಸ್ಕೃತಿಕ ರೂಪಕ.
ಸಭಾ ಕಾರ್ಯಕ್ರಮ ಹಾಗೂ ಸನ್ಮಾನ
ಸೆಪ್ಟೆಂಬರ್ 16 ರ ರಾತ್ರಿ 8:30 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಡಾ. ಗಣಪತಿ ಆರ್. ಭಟ್ಟ, ಡಾ. ನಾಗೇಶ ಎನ್. ಗಾಂವ್ಕರ್, ಗಣಪತಿ ಎಮ್. ಹೆಗಡೆ, ಡಾ. ಹರ್ಷಿತಾ ಸದಾನಂದ ಉಪಾಧ್ಯ, ಸಂಸ್ಥಾಪನಾ ಕಾರ್ಯದರ್ಶಿ ಶಿವರಾಮ ಟಿ. ದಾನಗೇರಿ ದಂಪತಿ, ಅರ್ಚಕರಾದ ಹರಿಹರ ಕೃಷ್ಣ ಭಟ್ಟ ದಂಪತಿ ಹಾಗೂ ನಿವೃತ್ತ ವಲಯ ಅರಣ್ಯಾಧಿಕಾರಿ ನಿಲಕಂಠ ವಿ. ದೇಸಾಯಿ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು.
ರಾತ್ರಿ 10:30 ರಿಂದ ಪದ್ಮಶ್ರೀ ದಿ|| ಚಿಟ್ಟಾಣಿ ಕಲಾ ಬಳಗ ಹಾಗೂ ಮಹಾಗಣಪತಿ ಯಕ್ಷಗಾನ ಮಂಡಳಿ ಬ್ರಹ್ಮರು ಇವರ ಕೂಡುವಿಕೆಯಲ್ಲಿ ‘ಕೃಷ್ಣಾರ್ಜುನ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.
