ಸುದ್ದಿ ಕನ್ನಡ ವಾರ್ತೆ

ಶಿರಸಿ:
ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಗೆದ್ದು ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆ ಯಾಗಿರುವ ಯಸಳೆಯ ಸಂಜಯ ಜಗದೀಶ ನಾಯ್ಕ ಅವರನ್ನು ಬಿಜೆಪಿ ಗ್ರಾಮೀಣ ಮಂಡಳದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಯೋಗ ಎಂಬುದು ಭಗವಂತನ ವರ, ಯೋಗ ಎಂದರೆ ಸಾಮಾನ್ಯವಲ್ಲ,ಪ್ರತಿ ನಿತ್ಯ ಯೋಗ ಮಾಡುವವರು ದುಶ್ಚಟಗಳಿಂದ ದೂರ ವಿರುತ್ತಾರೆ.

ಯೋಗ , ಧ್ಯಾನ, ಪೂಜೆ ಪುನಸ್ಕಾರಗಳನ್ನು ಮಾಡುವುದರಿಂದ ದುಶ್ಚಟಗಳು ತನ್ನಿಂದ ತಾನೇ ದೂರವಾಗುತ್ತದೆ. ಸಂಜಯ್ ಅವರ ಸಾಧನೆಯನ್ನು ನೋಡಿ ಇನ್ನಷ್ಟು ಯುವಕರು ತಿದ್ದಿಕೊಳ್ಳಬೇಕು. ಒಳ್ಳೆಯದನ್ನು ಮಾಡಿದರೂ ಹೇಳಬೇಕು.ಕೆಟ್ಟದ್ದನ್ನೂ ಮಾಡಿದರೂ ಹೇಳಬೇಕು ಅದು ನಾಗರಿಕನ ಕರ್ತವ್ಯ. ಸಂಜಯ್ ಅವರ ಸಾಧನೆಯ ಹಿಂದೆ ತಂದೆ ತಾಯಿಯ ಶ್ರಮ ಸಾಕಷ್ಟಿದೆ. ಸಂಜಯ್ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿ ಊರಿಗೆ ನಾಡಿಗೆ ಒಳ್ಳೆಯ ಹೆಸರನ್ನು ತರಲಿ ಎಂದು ಶುಭ ಹಾರೈಸಿದರು , ಮುಂದಿನ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಭರವಸೆ ನೀಡಿದರು.

ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಭಾರತದ ಕೀರ್ತಿಯನ್ನು ಹೆಚ್ಚಿಸಲು ತೆರಳುತ್ತಿರುವ ಸಂಜಯ್ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ. ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಾಗ ಅವರಿಗೆ ಇನ್ನಷ್ಟು ಸಾಧಿಸಲು ಹುಮ್ಮಸ್ಸು ಬರುತ್ತದೆ.ಆ ಉದ್ದೇಶದಿಂದ ಸಂಜಯ್ ಅವರನ್ನು ಸನ್ಮಾನಿಸುತ್ತಿದ್ದೆವೆ‌. ಅನಂತಮೂರ್ತಿ ಹೆಗಡೆ ಅವರು ಗ್ರಾಮೀಣ ಭಾಗ ಇರಬಹುದು ಅಥವಾ ನಗರ ಭಾಗದಲ್ಲಿರುವವರಿಗೆ ಯಾರಿಗೆ ಏನೇ ಸಮಸ್ಯೆ ಆದರೂ ಅವರಿಗೆ ಸಹಕಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಕ್ರೀಡಾ ಪಟುಗಳಿಗೆ ಜನರ ಸಹಕಾರ ಸಾಕಷ್ಟು ಬೇಕಾಗುತ್ತದೆ. ಸಂಜಯ್ ಅವರ ಜೊತೆ ನಾವೆಲ್ಲರೂ ಇರುತ್ತೇವೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಗ ಪಟು ಸಂಜಯ್ ನಾಯ್ಕ ಮಾತನಾಡಿ, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಪ್ರತಿಭೆಗಳು ಬೆಳೆಯಲು ಅನುಕೂಲ ವಾಗುತ್ತದೆ. ನಾನು 7 ನೇ ತರಗತಿಯಿಂದ ಯೋಗ ಕಲಿಯುತ್ತಿದ್ದೇನೆ.ಈಗಾಗಲೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾ, ರಾಜ್ಯ ಹಾಗೂ ದೇಶ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ತುಮಕೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆ ಯಾಗಿರುವುದು ಸಂತಸ ತಂದಿದೆ. ನನ್ನ ಪ್ರತಿಭೆಯನ್ನು ಗುರುತಿಸಿ ಗೌರವಿಸಿದ ಬಿಜೆಪಿ ಗ್ರಾಮೀಣ ಮಂಡಳದವರಿಗೆ
ಅನಂತಮೂರ್ತಿ ಹೆಗಡೆ ಅವರಿಗೆ ಹಾಗೂ ಊರ ಗಣ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಆ ಭಾಗದ ಮುಖಂಡರಾದ ಸುಧೀರ್ ದೇವಾಡಿಗ ಮತ್ತು ಎಸಳೆ ಗ್ರಾಮಸ್ಥರು ನಾಗರಿಕ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಾಗಪ್ಪ ದೇವಾಡಿಗ,ರತ್ನಾ ಶೆಟ್ಟಿ, ಶಿವರಾಮ ಶೆಟ್ಟಿ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಇದ್ದರು.