ಸುದ್ದಿ ಕನ್ನಡ ವಾರ್ತೆ
​ಶಿರಸಿ: ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ವಿಚಾರದಲ್ಲಿ ಜಿಲ್ಲೆಯ ಹಿತದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಸಂಸದರು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕರೆ ನೀಡಿದ್ದಾರೆ.
​ರಾಜ್ಯ ವಿಧಾನಸಭಾ ಉಪಸಭಾಧ್ಯಕ್ಷ ಮಂಕಾಳ ವೈದ್ಯ ಅವರು ಸೋಂದಾ ಸ್ವರ್ಣವಲ್ಲೀ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಬೇಡ್ತಿ-ವರದಾ ಯೋಜನೆಯ ಸರ್ವೇ ಕಾರ್ಯ ಅಂತಿಮ ಹಂತ ತಲುಪಿದೆ.

​ರಾಜ್ಯ-ಕೇಂದ್ರ ಎಂದು ಹೊಣೆಗಾರಿಕೆ ವರ್ಗಾಯಿಸುವ ಬದಲು ಅಘನಾಶಿನಿ ನದಿ ಉಳಿವಿಗಾಗಿ ಜಿಲ್ಲೆಯ ಜನಪ್ರತಿನಿಧಿಗಳು ಐಕ್ಯತೆ ಪ್ರದರ್ಶಿಸಬೇಕು.
​ಶೀಘ್ರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಯೋಜನೆಗೆ ತಡೆ ನೀಡುವುದಂತೆ ಒತ್ತಾಯಿಸಬೇಕು ಎಂದು ಹೇಳಿದರು.
​​ಇದಕ್ಕೆ ಪ್ರತಿಕ್ರಿಯಿಸಿದ ವಿಧಾನಸಭಾ ಉಪಸಭಾಧ್ಯಕ್ಷ ಮಂಕಾಳ ವೈದ್ಯ, ನೀರಿನ ಲಭ್ಯತೆಯೇ ಇಲ್ಲದ ಯೋಜನೆ ವ್ಯರ್ಥವಾಗಿದ್ದು, ಈ ವಿಚಾರದಲ್ಲಿ ಪೂಜ್ಯರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.
​ಬೇಡ್ತಿ-ಅಘನಾಶಿನಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ನದಿ ತಿರುವು ಯೋಜನೆಯ ಸರ್ವೇ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

​ಸೆ. 3ರಂದು ‘ಕಾರವಾರ ಚಲೋ’ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಆ. 26ರಂದು ನಡೆಯುವ ಬೇಡ್ತಿ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದರು.
​ಈ ಸಂದರ್ಭದಲ್ಲಿ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ,ಅನಂತ ಹುಳಗೋಳ, ನಿರಂಜನ, ದಿನೇಶ ಭಟ್ಟ, ಭುವನ್ ಭಾಗವತ, ಸೇರಿದಂತೆ ಹಲವು ಯುವ ಮುಖಂಡರು ಉಪಸ್ಥಿತರಿದ್ದರು.

​ಬೇಡ್ತಿ-ಅಘನಾಶಿನಿ ಸಂರಕ್ಷಣಾ ಸಮಿತಿಯ ಗೌರವ ಮಾರ್ಗದರ್ಶಕರಾದ ನೇಲಮಾವು ಮಠದ ಶ್ರೀಗಳನ್ನೂ ಮಂಕಾಳ ವೈದ್ಯ ಅವರು ಭೇಟಿ ಮಾಡಿ ಆಶೀರ್ವಾದ ಪಡೆದರು.