ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕಲಂಗುಟ್ ಬೀಚ್ ಬಳಿ ಪಾರ್ಕ ಮಾಡಿದ್ದ ಕಾರಿನಲ್ಲಿ ಪತ್ತೆಯಾಗಿದ್ದ ಕನ್ನಡಿಗನ ಮೃತದೇಹದ ಬಗ್ಗೆ ಪೋಲಿಸರು ನಡೆಸಿದ ತನಿಖೆಯಿಂದ ಹಲವು ಹೆಚ್ಚಿನ ಮಾಹಿತಿಯು ಹೊರಬೀಳುತ್ತಿದೆ.

ಗೋವಾದ ಕಲಂಗುಟ್ ಬೀಚ್ ಬಳಿ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ ಮಾಡಿದ್ದ ರೆಂಟ್ ಎ ಕ್ಯಾಬ್ ಕಾರಿನಲ್ಲಿ ಕರ್ನಾಟಕದ ರಾಯಚೂರಿನ ಷಣ್ಮುಖ ಶಿವಪುತ್ರ ಭಾವಿಮನಿ (41) ಎಂಬ ಕನ್ನಡಿಗನ ಮೃತದೇಹ ಮಂಗಳವಾರ ಪತ್ತೆಯಾಗಿತ್ತು. ಈ ಘಟನೆಯ ನಂತರ ಕಲಂಗುಟ್ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.

 

ಕಲಂಗುಟ್ ಬೀಚ್ ಬಳಿ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸುತ್ತಿದ್ದ ಸಿಬ್ಭಂಧಿಗೆ ಬಾಡಿಗೆ ಕಾರಿನಲ್ಲಿ ಹಿಂಬದಿ ಸೀಟಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ವ್ಯಕ್ತಿಯೋರ್ವ ಮಲಗಿರುವುದು ಕಂಡುಬಂತು. ಈ ಕುರಿತಂತೆ ಆತ ಪೋಲಿಸರಿಗೆ ಮಾಹಿತಿ ನೀಡಿದ ಎನ್ನಲಾಗಿದೆ. ಮಾಹಿತಿ ಪಡೆದ ಕಲಂಗುಟ್ ಪೋಲಿಸರು ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ಈತ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪೋಲಿಸರು ಪಂಚನಾಮೆ ನಡೆಸಿ ಗೋವಾ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

 

ಸಾವಿಗೆ ಕಾರಣವೇನು….?
ವಿಧಿವಿಜ್ಞಾನ ತಜ್ಞರು ಮತ್ತು ಶ್ವಾನದಳ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ದೇಹದ ಮೇಲೆ ಯಾವುದೇ ಗಾಯಗಳಾಗಿರುವುದು ಕಂಡುಬಂದಿಲ್ಲ. ಕಾರಿನಲ್ಲಿ ಮದ್ಯದ ಬಾಟಲಿಗಳು ಕಂಡುಬಂದಿದ್ದು, ಮೃತ ವೈಕ್ತಿ ಷಣ್ಮುಖ ರವರು ಮದ್ಯ ಸೇವಿಸಿ ಕಾರಿನಲ್ಲಿ ನಿದ್ರಿಸಿದ ನಂತರ ಸಾವು ಸಂಭವಿಸಿರಬಹುದು ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಗೋವಾಕ್ಕೆ ಬಂದಿದ್ದು ಏಕೆ…?
ಷಣ್ಮುಖ ಬಾವಿಮನಿ ಎಂಬ ವ್ಯಕ್ತಿ ಕಳೆದ ಶನಿವಾರ ತನ್ನ ಸ್ನೇಹಿತರೊಂದಿಗೆ ಗೋವಾ ಪ್ರವಾಸಕ್ಕೆ ಬಂದಿದ್ದರು. ಎರಡು ದಿನಗಳ ಕಾಲ ಎಲ್ಲರೂ ಒಟ್ಟಿಗೆ ಗೋವಾ ಸುತ್ತಾಡಿದ ನಂತರ ಸೋಮವಾರ ಸ್ನೇಹಿತರೆಲ್ಲರೂ ತಮ್ಮ ಊರಿಗೆ ಮರಳಿದ್ದರು. ಆದರೆ ಷಣ್ಮುಖ ಎಂಬ ವ್ಯಕ್ತಿ ಕಲಂಗುಟ್ ನಲ್ಲಿಯೇ ಒಂದೆರಡು ದಿನ ಉಳಿಯುವ ಯೋಚನೆ ಮಾಡಿ ಅಲ್ಲಿಯೇ ತಂಗಿದ್ದ. ಶನಿವಾರವೇ ಬಾಡಿಗೆಗೆ ಪಡೆದಿದ್ದ ಕಾರನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ.