ಸುದ್ದಿ ಕನ್ನಡ ವಾರ್ತೆ

ಕನಕಗಿರಿ: ಉತ್ತಮ ಫಸಲು ಸಂಬಿ ಬೆಳೆ ಬರುತ್ತದೆ ಎಂಬ ಆಸೆಯಿಂದ 8 ತಿಂಗಳು ಶ್ರಮಿಸಿದರೂ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಪಪ್ಪಾಯಿ ಬೆಳೆ ನಾಶ ಮಾಡಿದ ಘಟನೆ ಸಮೀಪದ ನಿರ್ಲೂಟಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗ್ರಾಮದ ರೈತ ಕೆಂಚಪ್ಪ ತನ್ನ 10 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ಸಂಪೂರ್ಣ ನಾಶವಾಗಿದ್ದು, 8 ರಿಂದ 9 ಲಕ್ಷ ರೂ. ನಷ್ಟ ಅನುಭವಿಸಿದ್ದಾರೆ.
ಮಳೆ ಕೊರತೆ ನಾಶ: ರೈತರು ಕಳೆದ ವರ್ಷ ಪಪ್ಪಾಯಿ ಬೆಳೆ ನೆಡಲು ಲಕ್ಷಗಟ್ಟಲೆ ಹಣ ಹೂಡಿದ್ದರು. ಬಿತ್ತನೆ, ಗೊಬ್ಬರ, ಕೀಟನಾಶಕ, ಹನಿ ನೀರಾವರಿ ಸೇರಿ ನಾನಾ ರೀತಿಯಲ್ಲಿ ಖರ್ಚು ಮಾಡಿದ್ದರು. ಆದರೆ ಮಳೆ ಕೊರತೆ ಮತ್ತು ಪ್ರತಿಕೂಲ ವಾತಾವರಣದಿಂದಾಗಿ ಬೆಳೆ ನಿರೀಕ್ಷಿತ ರೀತಿಯಲ್ಲಿ ಬೆಳೆಯಲಿಲ್ಲ.

8 ತಿಂಗಳ ಕಾಲ ನಿತ್ಯ ನೀರು ಹರಿಸಿ, ಕಾಪಾಡಿದೆ. ಆದ್ರೆ ಗಿಡಗಳು ಸರಿಯಾಗಿ ಬೆಳೆಯಲಿಲ್ಲ. ಬಂದ ಕಾಯಿಗಳೂ ಗುಣಮಟ್ಟ ಇಲ್ಲದೆ ಹಾಳಾದವು. ಇನ್ನು ಉಳಿಸಿಕೊಳ್ಳೋದಕ್ಕೆ ಆಗದೆ ಕೊನೆಗೆ ಇಡೀ ಬೆಳೆಯನ್ನು ಕಿತ್ತು ಹಾಕಿದೆ ಎಂದು ರೈತ ಕಣ್ಣೀರಿಟ್ಟರು.
ಸಾಲ ಮಾಡಿ ಬೆಳೆದಿದ್ದೆ: ಬ್ಯಾಂಕ್ ಮತ್ತು ಕೈಸಾಲ ಮಾಡಿ 8 ರಿಂದ 9 ಲಕ್ಷ ರೂ. ಖರ್ಚು ಮಾಡಿದ್ದೆ. ಈಗ ಒಂದೇ ಒಂದು ರೂ., ಆದಾಯವೂ ಬಂದಿಲ್ಲ. ಇನ್ನು ಸಾಲ ಹೇಗೆ ತೀರಿಸೋದು ಅಂತಾನೇ ಗೊತ್ತಾಗ್ತಿಲ್ಲ ಎಂದು ಅಳಲು ತೋಡಿಕೊಂಡರು.

ಈಗ ನಷ್ಟದ ಹೊಲವನ್ನು ಸ್ವಚ್ಛಗೊಳಿಸಿ ಬೇರೆ ಬೆಳೆ ಹಾಕುವ ತಯಾರಿಯಲ್ಲಿದ್ದಾರೆ.
ರೈತರ ಆಗ್ರಹ: ಹವಾಮಾನ ವೈಪರೀತ್ಯದಿಂದ ನಷ್ಟವಾದ ರೈತರಿಗೆ ಸರಕಾರ ಕೂಡಲೇ ಪರಿಹಾರ ನೀಡಬೇಕು. ಬೆಳೆ ವಿಮೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ನೆರವು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕನಕಗಿರಿ ಭಾಗದಲ್ಲಿ ಕಳೆದ ಎರಡು ವರ್ಷದಿಂದ ಮಳೆ ಕೊರತೆಯಿಂದಾಗಿ ತೋಟಗಾರಿಕೆ ಬೆಳೆಗಳು ಹೆಚ್ಚಾಗಿ ಹಾನಿಗೊಳಗಾಗುತ್ತಿವೆ. ಇದರಿಂದ ಸಣ್ಣ ಮತ್ತು ಮಧ್ಯಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅನೇಕ ವರ್ಷದಿಂದ ಉತ್ತಮ ಲಾಭ: ಅನೇಕ ವರ್ಷಗಳಿಂದ ನಾನಾ ಪಪ್ಪಾಯಿ ಬೆಳೆಯಲ್ಲಿ ಉತ್ತಮ ಲಾಭ ಕಂಡಿದ್ದ, ರೈತ ಕೆಂಚಪ್ಪ ಪ್ರಸಕ್ತ ವರ್ಷ ಪಪ್ಪಾಯಿ ಬೆಳೆ ಕೈಕೊಟ್ಟಿದ್ದರಿಂದ 8,9 ಲಕ್ಷ ನಷ್ಟ ಅನುಭವಿಸಿದ್ದಾನೆ. ಉತ್ತಮ ಇಳುವರಿ ಕಂಡ ಪಪ್ಪಾಯಿ ಹಣ್ಣುಗಳನ್ನು ಗೋವಾ, ಮಹಾರಾಷ್ಟ್ರ, ಬೆಂಗಳೂರು, ಹೈದ್ರಾಬಾದ್, ಮುಂಬೈ ಸೇರಿದಂತೆ ನಾನಾ ನಗರಗಳಿಗೆ ರಪ್ತಾಗುತ್ತಿತ್ತು ಆದರೆ ಪ್ರಸಕ್ತ ವರ್ಷ ಬೆಳೆ ಹಾಳಾಗಿದ್ದರಿಂದ ಟ್ರ್ಯಾಕ್ಟರ್ ಮೂಲಕ ನಾಶ ಮಾಡಲಾಯಿತು ಎಂದರು.