ಸುದ್ಧಿಕನ್ನಡ ವಾರ್ತೆ
ಪಣಜಿ: 2013 ರಲ್ಲಿ ಗೋವಾದಲ್ಲಿ ಮಹಿಳಾ ಪತ್ರಕರ್ತೆಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠ ತೀರ್ಪು ನೀಡಿದೆ. ಮಹಿಳಾ ಪತ್ರಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಸಂಭಂಧಿಸಿದಂತೆ ತೆಹಲ್ಕಾ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್ ಪಾಲ್ (Tarun Tejpal)  ರವರನ್ನು ದೋಷಿ ಎಂದು ನ್ಯಾಯಾಲಯವು ತೀರ್ಪೂ ಪ್ರಕಟಿಸಿದೆ.

 

ನ್ಯಾಯಮೂರ್ತಿ ಡಾ.ನೀಲಾ ಗೋಖಲೆ ಹಾಗೂ ನ್ಯಾಯಮೂರ್ತಿ ಅಮಿತ್ ಜಮಸಂದೇಕರ್ ದ್ವೀಸದಸ್ಯೀಯ ಪೀಠವು ಗೋವಾ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿ ಮೇ 2021 ರಲ್ಲಿ ಮಾಪ್ಸಾ ಸೆಶನ್ಸ ನ್ಯಾಯಾಲಯ ತೇಜ್ ಪಾಲ್ ರವರನ್ನು ಖುಲಾಸೆಗೊಳಿಸಿದ್ಧನ್ನು ರದ್ಧುಗೊಳಿಸಿದೆ. ಈ ಪ್ರಕರಣದಲ್ಲಿ ತೇಜ್ ಪಾಲ್ ರವರನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಈ ಇಡೀ ಪ್ರಕರಣವು ನವೆಂಬರ್ 2013 ರಲ್ಲಿ ಗೋವಾದ ಬಾಂಬೋಲಿಂ ಬಳಿಯ ಪಂಚತಾರಾ ಹೋಟೆಲ್ ನಲ್ಲಿ ನಡೆದಿತ್ತು. ಗೋವಾದ ಐಷಾರಾಮಿ ಹೋಟೆಲ್ ನಲ್ಲಿ ತೆಹಲ್ಕಾ ನಿಯತಕಾಲಿಕವು ಥಿಂಕ್ ಫೆಸ್ಟ ಆಯೋಜಿಸಿತ್ತು. ಈ ಸಂದರ್ಭದಲ್ಲಿ ತರುಣ್ ತೇಜ್ ಪಾಲ್ ಇದೇ ಹೋಟೆಲ್ ನ ಲಿಫ್ಟ ನಲ್ಲಿ ಸಹೋದ್ಯೋಗಿ ಪತ್ರಕರ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದರು. ದೇಶಾದ್ಯಂತ ಈ ಘಟನೆ ಭಾರಿ ಸಂಚಲನ ಮೂಡಿಸಿತ್ತು. ಗೋವಾ ಪೋಲಿಸರು ತ್ವರಿತ ಕ್ರಮ ಕೈಗೊಂಡು ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿದ್ದರು.

ಕಳೆದ 13 ವರ್ಷಗಳಲ್ಲಿ ಈ ಹೈಫ್ರೊಫೈಲ್ ಪ್ರಕರಣವು ಅನೇಕ ಪ್ರಮುಖ ರಾಜಕೀಯ ಬೆಳವಣಿಗೆಯನ್ನೂ ಕಂಡಿತ್ತು. ಮಾಪ್ಸಾ ನ್ಯಾಯಾಲಯದಲ್ಲಿ ಸುಧೀರ್ಘ ವಿಚಾರಣೆಯ ನಂತರ ಮಾಪ್ಸಾ ಸೆಶನ್ಸ ನ್ಯಾಯಾಲಯವು ಮೇ 2021 ರಲ್ಲಿ ತರುಣ್ ತೇಜ್ ಪಾಲ್ ರವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತ್ತು. ಗೋವಾ ಸರ್ಕಾರವು ಈ ಪ್ರಕರಣದಲ್ಲಿ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠದಲ್ಲಿ ಅರ್ಜಿಯನ್ನು ಸಲ್ಲಿಸಿತ್ತು.

ಇದೀಗ ಅಗಷ್ಟ 6 ರಂದು ಗುರುವಾರ ತೇಜ್ ಪಾಲ್ ಪ್ರಕರಣದಲ್ಲಿ ಮುಂಬಯಿ ಉಚ್ಛ ನ್ಯಾಯಾಲಯ ಗೋವಾ ಪೀಠವು ತೇಜ್ ಪಾಲ್ ದೋಷಿ ಎಂದು ಘೋಷಿಸಿದೆ. 13 ವರ್ಷಗಳ ಸುಧೀರ್ಘ ಕಾನೂನು ಹೋರಾಟಕ್ಕೆ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.