ಸುದ್ಧಿಕನ್ನಡ ವಾರ್ತೆ
ಪಣಜಿ: ಕಳೆದ ಎರಡು ದಿನಗಳಿಂದ ಬೆಳಗಾಗಿ ಗೋವಾ ಗಡಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಗೋವಾದ ದೋಡಾ ಮಾರ್ಗ ಭಾಗದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಈ ಭಾಗದಲ್ಲಿ ಮಹದಾಯಿ ನದಿ ನೀರು ಉಕ್ಕಿ ಹರಿಯುತ್ತಿದ್ದು ಹಲವು ಜನವಸತಿ ಪ್ರದೇಶದ ವರೆಗೂ ನದಿ ನೀರು ನುಗ್ಗಿದೆ. ಇದರಿಂದಾಗಿ ಕೆಲ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ವಾಹನ ಸಂಚಾರಕ್ಕೂ ಅಡ್ಡಿಯುಂಟಾಗಿದೆ. ಸೇತುವೆಯ ಮೇಲೆ ನೀರು ಹರಿಯುತ್ತಿದೆ. ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.

ಕಳೆದ ಕೆಲ ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿದೆ. ದೋಡಾಮಾರ್ಗ ಗ್ರಾಮೀಣ ಭಾಗದ ಅವಸ್ಥೆ ಹೇಳತೀರದು ಎಂಬಂತಾಗಿದೆ. ವಿದ್ಯುತ್ ಸಂಪರ್ಕವಿಲ್ಲ, ರಸ್ತೆ ಸಂಪರ್ಕವಿಲ್ಲ, ಜನತೆ ಆತಂಕ್ಕೊಳಗಾಗಿದ್ದಾರೆ.

ತೀಲಾರಿ ಅಣೇಕಟ್ಟಿನ ಜಲಾನಯನ ಪ್ರದೇಶದಲ್ಲಿಯೂ ಧಾರಾಕಾರ ಮಳೆ ಮುಂದುವರೆದಿದ್ದು ಅಣೇಕಟ್ಟಿನಲ್ಲಿ ನೀರಿನ ಮಟ್ಟ ವೇಗವಾಗಿ ಹೆಚ್ಚುತ್ತಿದೆ. ಸದ್ಯ ಅಣೇಕಟ್ಟಿನಲ್ಲಿ ಶೇ 85.50 ರಷ್ಟು ತಲುಪಿದೆ. ಅಣೇಕಟ್ಟಿನಿಂದ ಸುಮಾರು 312.06 ಮಿ.ಮೀ/ಸೆಕೆಂಡ ವೇಗದಲ್ಲಿ ನೀರು ಹೊರಹಾಕಲಾಗುತ್ತಿದೆ. ಇಷ್ಟೇ ಅಲ್ಲದೆಯೇ ತೇರಾವನ್ -ಮೇದೆ ಬ್ಯಾರೇಜ್ ನಿಂದ 63.22 ಮಿಮಿ/ಸೆಕೆಂಡ್ ನೀರನ್ನು ಹೊರಬಿಡಲಾಗುತ್ತಿದೆ. ಈ ನೀರು ತಿಳಾರಿ ನೀರಿನೊಂದಿಗೆ ಸೇರಿಕೊಂಡು ಅಣೇಕಟ್ಟಿನ ಕೆಳಭಾಗದಲ್ಲಿ ನೀರಿನ ಹರಿವಿನ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಅಣೇಕಟ್ಟಿನ ಕೆಳ ಭಾಗದಲ್ಲಿರುವ ಕೃಷಿ ಕ್ಷೇತ್ರಗಳಿಗೆ ನೀರು ನುಗ್ಗಿದೆ. ಮಳೆ ಹೀಗೆಯೇ ಮುಂದುವರೆದರೆ ಇನ್ನಷ್ಟು ಅನಾಹುತ ಹೆಚ್ಚಾಗುವ ಭೀತಿ ಎದುರಾಗಿದೆ.