ಸುದ್ದಿ ಕನ್ನಡ ವಾರ್ತೆ
​ಕುಮಟಾ:ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66ರ ಬರ್ಗಿಯ ಸಮೀಪ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐಟಿಐ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

 

ಮೃತ ವಿದ್ಯಾರ್ಥಿಯನ್ನು ಕುಮಟಾ ತಾಲೂಕಿನ ಹೆಗಡೆ ಗ್ರಾಮದ ತಾರಿಬಾಗಿಲು ಮೂಲದ ಚಿನ್ಮಯ ಪಟಗಾರ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೋರ್ವ ವಿದ್ಯಾರ್ಥಿ ಶಿರಸಿ ಮೂಲದ ತಿಲಕ್ ಮರಾಠಿ ಗಂಭೀರ ಸ್ಥಿತಿಯಲ್ಲಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
​ಚಿನ್ಮಯ ಪಟಗಾರ ಹಾಗೂ ತಿಲಕ್ ಮರಾಠಿ ಅಂಕೋಲಾದ ಐಟಿಐ ಕಾಲೇಜಿಗೆ ಪ್ರಾಕ್ಟಿಕಲ್ ಪರೀಕ್ಷೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕುಮಟಾ ತಾಲೂಕಿನ ಬರ್ಗಿ ಸಮೀಪ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ವಿದ್ಯಾರ್ಥಿಗಳು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರಿಸಲಾಗಿತ್ತು. ಆದರೆ ತಲೆಗೆ ಗಂಭೀರ ಪೆಟ್ಟಾಗಿದ್ದ ಚಿನ್ಮಯ ಪಟಗಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

​ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಕ್ಕಿ ಹೊಡೆದು ಪರಾರಿಯಾದ ವಾಹನ ಹಾಗೂ ಅದರ ಚಾಲಕನ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವ ವಿದ್ಯಾರ್ಥಿಯ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯರು, ಸ್ನೇಹಿತರು ಹಾಗೂ ಸಹಪಾಠಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.