ಸುದ್ದಿ ಕನ್ನಡ ವಾರ್ತೆ
ಬಾಗಲಕೋಟೆ:ಜಿಲ್ಲೆಯ ಕೋರ್ತಿ-ಕೊಲ್ಹಾರ ನಡುವಿನ ಕೃಷ್ಣಾ ನದಿಗೆ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿ ಸೇತುವೆಯ ಮೇಲೆ ಸಂಭವಿಸಿದ ಭೀಕರ ಅಪಘಾತದಲ್ಲಿ ಟಿಪ್ಪರ್ ಲಾರಿಯೊಂದು ನದಿಗೆ ಉರುಳಿದ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಮುಂಭಾಗದಲ್ಲಿದ್ದ ಕಾರನ್ನು ಓವರ್ಟೇಕ್ ಮಾಡಲು ಯತ್ನಿಸಿದ ವೇಳೆ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ, ಸೇತುವೆಯ ಸುರಕ್ಷತಾ ತಡೆಗೋಡೆಯನ್ನು ಒಡೆದು ಟಿಪ್ಪರ್ ನೇರವಾಗಿ ಕೃಷ್ಣಾ ನದಿಗೆ ಬಿದ್ದಿದೆ.
ಅಪಘಾತದಲ್ಲಿ ಟಿಪ್ಪರ್ ಚಾಲಕ ಸಂತೋಷ್ ಕೋಟಿ ನಾಪತ್ತೆಯಾಗಿದ್ದು, ಲಾರಿಯ ಕ್ಲೀನರ್ ಸಂಜು ಮಲ್ಲಪ್ಪ ಮುಳಗೆ (28) ಅವರನ್ನು ಸ್ಥಳೀಯ ಮೀನುಗಾರರು ತೆಪ್ಪದ ಸಹಾಯದಿಂದ ರಕ್ಷಿಸಿದ್ದಾರೆ. ಘಟನೆ ಬಳಿಕ ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಕಾರ್ಯಾಚರಣೆ ನಡೆಸಿದರೂ ಚಾಲಕ ಪತ್ತೆಯಾಗಿಲ್ಲ. ಕತ್ತಲಾಗಿದ್ದರಿಂದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಬಳಿಕ ಪುನರಾರಂಭಿಸಲಾಗಿದೆ.
ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ನಂತರ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಿದರು. ನದಿಗೆ ಬಿದ್ದಿರುವ ಟಿಪ್ಪರ್ ಲಾರಿಯನ್ನು ಭಾರೀ ಕ್ರೇನ್ ಮೂಲಕ ಮೇಲಕ್ಕೆ ಎತ್ತುವ ಕಾರ್ಯವೂ ಕೈಗೊಳ್ಳಲಾಗಿದೆ.
