ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಬಾಲ್ಯದಿಂದಲೇ ದೇಶಸೇವೆಯ ಕನಸು ಕಂಡಿದ್ದ ನಿಲೇಶ ತಮ್ಮ ನಿರಂತರ ಪರಿಶ್ರಮ, ಶಿಸ್ತು ಹಾಗೂ ಆತ್ಮವಿಶ್ವಾಸದ ಫಲವಾಗಿ ಭಾರತೀಯ ಸೇನೆಯ ಅಗ್ನಿವೀರ ಹುದ್ದೆಗೆ ಆಯ್ಕೆಯಾಗಿದ್ದಾರೆ. ದೇಶದ ರಕ್ಷಣೆಯಂತಹ ಮಹತ್ತರ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಅವಕಾಶ ದೊರೆತಿರುವುದು ಅವರ ಕುಟುಂಬದಷ್ಟೇ ಅಲ್ಲದೆ ಇಡೀ ಗ್ರಾಮಸ್ಥರಿಗೆ ಸಂತಸ ತಂದಿದೆ.

ಗ್ರಾಮೀಣ ಪ್ರದೇಶದ ಯುವಕರಿಗೂ ದೇಶಸೇವೆಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಅವಕಾಶಗಳಿವೆ ಎಂಬುದಕ್ಕೆ ನಿಲೇಶ ಪಾಟ್ನೆಕರ ಅವರು ಉತ್ತಮ ಉದಾಹರಣೆಯಾಗಿದ್ದಾರೆ. ಅವರ ಈ ಸಾಧನೆ ಇತರೆ ಯುವಕರಿಗೂ ಸ್ಫೂರ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು ಸಶಸ್ತ್ರ ಪಡೆಗಳತ್ತ ಆಕರ್ಷಿತರಾಗುವಂತೆ ಮಾಡಿದೆ.

ತಾಲೂಕಿನ ಉಳವಿ ಗ್ರಾಮ ಪಂಚಾಯತದ ಅಂಬೋಳಿ ಗ್ರಾಮದ ಪಾಟ್ನೆಯ ನಿವಾಸಿ ರತ್ನಾಕರ ಹಾಗೂ ರಜನಿ ದಂಪತಿಯ ಪುತ್ರ,ವಿಕಾಸ ಹಾಗೂ ವಿಜಯ ಅವಳಿ ತಮ್ಮಂದಿರ ಪ್ರೀತಿಯ ಹಿರಿಯ ಸಹೋದರ ನಿಲೇಶ ಪಾಟ್ನೆಕರ ಅವರು ಅಗ್ನಿವೀರ ಯೋಜನೆಯಡಿ ಭಾರತೀಯ ಸೇನೆಗೆ ಆಯ್ಕೆಯಾಗುವ ಮೂಲಕ ಗ್ರಾಮಕ್ಕೆ ಹಾಗೂ ಜೋಯಿಡಾ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.
ನಿಲೇಶ ಪಾಟ್ನೆಕರ ಅವರು ಉತ್ತಮ ಕರಾಟೆ ಪಟುವಾಗಿದ್ದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಸಾಧನೆ ಮಾಡಿರುತ್ತಾರೆ.ಇವರ ಆಯ್ಕೆಗೆ ಸಮಸ್ತ ಗ್ರಾಮಸ್ಥರು, ಸ್ನೇಹಿತರು, ಬಂಧು-ಬಳಗ ಹಾಗೂ ಕರಾಟೆ ತರಬೇತಿಯ ಗುರುಗಳು,ಸಹಪಾಠಿಗಳು, ಗಣ್ಯರು ಹರ್ಷ ವ್ಯಕ್ತಪಡಿಸಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ದೇಶ ಸೇವೆಯ ಪವಿತ್ರ ಪಯಣ ಆರಂಭಿಸಿರುವ ನಿಲೇಶ ಅವರು ಭಾರತೀಯ ಸೇನೆಯಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಿ ಕುಟುಂಬ, ಊರು ಹಾಗೂ ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಎಲ್ಲರೂ ಶುಭ ಹಾರೈಸಿದ್ದಾರೆ.