ಸುದ್ದಿ ಕನ್ನಡ ವಾರ್ತೆ

ದಾಂಡೇಲಿ:ನಗರದ ಹಾರ್ನಬಿಲ್ ಸಭಾಭವನದಲ್ಲಿ ಸುವರ್ಣನ್ಯೂಸ್, ಕನ್ನಡ ಪ್ರಭ ಹಾಗೂ ವನ್ಯಜೀವಿ ಇಲಾಖೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವನ್ಯಜೀವಿ ಸರಂಕ್ಷಣಾ ಅಭಿಯಾನ ಕಾರ್ಯಕ್ರಮ (ಸಹಬಾಳ್ವೆಯ ಸಹಕಾರ ಪಥ) ಸೀಸನ್ 5 ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್‌ ವನ್ಯಜೀವಿ ಅಭಿಯಾನದ ರಾಯಭಾರಿಯಾಗಿ ಭಾಗವಹಿಸಿದ್ದ ಕಾರ್ಯಕ್ರಮ ಅದ್ದೂರಿಯಾಗಿ ಸಂಪನ್ನಗೊಂಡಿತು.

ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆಯನ್ನು ಹಾಡಿಸಲಾಯಿತು. ನಂತರ ದಾಂಡೇಲಿ ನಗರದ ವ್ಯಾಪ್ತಿಯ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಗೋಲ್ಡನ್ ಸ್ಟಾರ್ ಗಣೇಶ ನಟಿಸಿರುವ ಚಲನಚಿತ್ರದ ಹಾಡುಗಳಿಗೆ ಅತ್ಯುತ್ತಮ ಹೆಜ್ಜೆ ಹಾಕಿ ನೃತ್ಯದ ಪ್ರದರ್ಶನ ನೆರೆದಿದ್ದ ಸಾರ್ವಜನಿಕರ ಹಾಗೂ ನಟ ಗಣೇಶ ಅವರ ಮನಸೂರೆಗೊಂಡಿತು. ವಿದ್ಯಾರ್ಥಿಗಳ ನೃತ್ಯದ ಪ್ರದರ್ಶನವನ್ನು ಮೆಚ್ಚಿ ಅವರ ಕೋರಿಕೆಯಂತೆ ತಮ್ಮದೇ ಆದ ಕೃಷ್ಣ ಪ್ರಣಯ ಸಖಿ ಚಲನಚಿತ್ರ ಹಾಡಿಗೆ ಮಕ್ಕಳೊಂದಿಗೆ ಖುಷಿಯಿಂದ ಹೆಜ್ಜೆ ಹಾಕಿದರು.ನಟ ಗಣೇಶ ಅವರು ಮಕ್ಕಳ ನೃತ್ಯ ಪ್ರದರ್ಶನದ ಬಗ್ಗೆ ತಮ್ಮ ಮಾತಿನಲ್ಲಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.

ಸಭಾ ಕಾರ್ಯಕ್ರಮಕ್ಕೆ ಕಾರ್ಯಕ್ರಮದ ರೂವಾರಿಗಳಾದ ಸುವರ್ಣನ್ಯೂಸ್ ನ ವಿನೋದ ನಾಯಕರವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ನಿಲೇಶ ಶಿಂಧೆಯವರು ಕಾಡಿನ ಮಹತ್ವ,ಮಾನವ ಪ್ರಾಣಿಗಳ ನಡುವಿನ ಸಂಘರ್ಷವನ್ನು ಪರಸ್ಪರ ಸಹಕಾರದ ಮೂಲಕ ಬಗೆಹರಿಸುವಿಕೆ,ನಮ್ಮೆಲ್ಲ ಪರಿಸರಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಯ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ ಅವರು ಮಾಹಿತಿ ಪಡೆದುಕೊಂಡು ಅದರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ವನ್ಯಜೀವಿ ಸಂರಕ್ಷಣಾ ಅಭಿಯಾನದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಹಾಗೂ ನೃತ್ಯದ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳ ತಂಡದವರಿಗೆ ಗೋಲ್ಡನ್ ಸ್ಟಾರ್ ಗಣೇಶ ಹಾಗೂ ಅಧಿಕಾರಿ ವರ್ಗದವರು ವಿತರಿಸಿದರು.ಜೊತೆಯಲ್ಲಿ ಪಾಲಕರು,ಶಿಕ್ಷಕರು ಸಹಕಾರ ನೀಡಿದರು. ಇದೇ ಸಂದರ್ಭದಲ್ಲಿ ಜೋಯಿಡಾ ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತಗೆ ಅತ್ಯುತ್ತಮ ಅರಣ್ಯ ಸ್ನೇಹಿ ಗ್ರಾಮ ಪಂಚಾಯತ ಪ್ರಶಸ್ತಿ ವಿತರಿಸಲಾಯಿತು. ವನ್ಯಜೀವಿ ಸಂರಕ್ಷಣಾ ಅಭಿಯಾನದ ರಾಯಭಾರಿ ಕನ್ನಡ ಚಲನಚಿತ್ರ ರಂಗದ ಖ್ಯಾತ ಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ ಈ ಪ್ರಶಸ್ತಿಯನ್ನು ನಂದಿಗದ್ದೆ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಅರುಣ ದೇಸಾಯಿ ಮತ್ತು ಅಭಿವೃದ್ಧಿ ಅಧಿಕಾರಿ ದತ್ತಾತ್ರೇಯ ಸಿ ಅವರಿಗೆ ನೀಡಿದರು.
ಈ ಸಂದರ್ಭದಲ್ಲಿ ಕೆನರಾ ವೃತ್ತದ ಸಿಸಿಎಫ್ ಟಿ ಹೀರಾಲಾಲ್, ಹಳಿಯಾಳ ವಿಭಾಗದ ಡಿಸಿಎಫ್ ಪ್ರಶಾಂತಕುಮಾರ ಕೆ ಸಿ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಶಿಂಧೆ,ಕನ್ನಡ ಪ್ರಭ ದಿನಪತ್ರಿಕೆಯ ಗೌರವ ಸಂಪಾದಕರಾದ ಜೋಗಿಯವರು, ಕಾರ್ಯಕ್ರಮದ ರೂವಾರಿ ವಿನೋದ ನಾಯ್ಕ,ನಂದಿಗದ್ದೆ ಗ್ರಾಮ ಪಂಚಾಯತದ ನಿಕಟ ಪೂರ್ವ ಉಪಾಧ್ಯಕ್ಷರಾದ ದಾಕ್ಷಾಯಣಿ ದಾನಶೂರ,ನಿಕಟ ಪೂರ್ವ ಸದಸ್ಯರಾದ ಧವಳೋ ಗಣೇಶ ಸಾವರ್ಕರ,ಸುಮನಾ ಹರಿಜನ,ಸುಕನ್ಯಾ ದೇಸಾಯಿ, ಭಾರತಿ ಹೆಗಡೆ,ಮಂಗಲಾ ಉಪಾಧ್ಯ,ಉಷಾ ಭಾಗ್ವತ, ಮಹಾಬಲೇಶ್ವರ ಹೆಗಡೆ, ಮಂಜುನಾಥ ಭಾಗ್ವತ, ಗಂಗಾಧರ ಹೆಗಡೆ,ಅಮರ ಭಾಗ್ವತ,ಬೇಜ್ಮಿ ಫರ್ನಾಂಡಿಸ, ಸಿಬ್ಬಂದಿಗಳಾದ ರಜತ್,ಕ್ಲೇವನ್ ಪ್ರಶಸ್ತಿ ಪ್ರಧಾನ ಸಂದರ್ಭದಲ್ಲಿ ಇದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಳಿಯಾಳ ವಿಭಾಗದ ಡಿಸಿಎಫ್ ಪ್ರಶಾಂತ ಕುಮಾರ ಪರಿಸರ ಸಂರಕ್ಷಣೆಯಲ್ಲಿ ಎಲ್ಲರ ಪಾತ್ರ, ಪಾಲಿಸಿದರೆ ಪಾಲು ಎಂಬ ಧ್ಯೇಯ ವಾಕ್ಯದ ಬಗ್ಗೆ,ಹಲವು ವಿಷಯದ ಕುರಿತು ಮಾತನಾಡಿದರು. ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ವಹಿಸಿದ್ದ ಕೆನರಾ ವೃತ್ತದ ಸಿಸಿಎಫ್ ಟಿ ಹೀರಾಲಾಲ್ ಮಾತನಾಡಿ ಗೋಲ್ಡನ್ ಸ್ಟಾರ್ ಗಣೇಶ ಅವರು ವನ್ಯಜೀವಿ ಅಭಿಯಾನದ ರಾಯಭಾರಿ ಆಗಿರುವುದು ಹೆಮ್ಮೆಯ ವಿಷಯ,ಅವರು ನಿಜವಾಗಿಯೂ ಡೈಮಂಡ್ ಸ್ಟಾರ್ ಎಂದು ಹೊಗಳಿದರು.ನಂತರ ತಮ್ಮ ಮಾತನ್ನು ಮುಂದುವರೆಸಿ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿನ ವಿವಿಧ ಸಸ್ಯ ಸಂಕುಲ ಹಾಗೂ ಪ್ರಾಣಿ,ಪಕ್ಷಿಗಳ ಬಗ್ಗೆ ಅಂಕೆ,ಸಂಖ್ಯೆಯ ಜೊತೆ ಮಾಹಿತಿ ನೀಡಿದರು.ಜೊತೆಯಲ್ಲಿ ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಬೆಲೆಬಾಳುವ ಮರಗಳ,ಹಾರ್ನಬಿಲ್ ನ ಒಂಭತ್ತು ಪ್ರಭೇದಗಳಲ್ಲಿ ನಾಲ್ಕು ಪ್ರಭೇದಗಳು ನಮ್ಮಲ್ಲಿ ಇರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಎಲ್ಲರೂ ಸೇರಿ ಈ ಸುಂದರ ಪರಿಸರವನ್ನು ಉಳಿಸೋಣ ಎಂದು ಕರೆ ನೀಡಿದರು. ಜೊತೆಯಲ್ಲಿ ಮಕ್ಕಳಿಗೆ ಪರಿಸರಕ್ಕೆ ಸಂಬಂಧಿಸಿದ ರಸಪ್ರಶ್ನೆಯನ್ನು ಕೇಳುವ ಮೂಲಕ ಸರಿಯಾದ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ನಟ ಗಣೇಶ ಅವರ ಮೂಲಕ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ವನ್ಯಜೀವಿ ಅಭಿಯಾನದ ರಾಯಭಾರಿ ಗೋಲ್ಡನ್ ಸ್ಟಾರ್ ಗಣೇಶ,ಕನ್ನಡ ಪ್ರಭ ದಿನಪತ್ರಿಕೆಯ ಗೌರವ ಸಂಪಾದಕರಾದ ಜೋಗಿಯವರನ್ನು ಹಾಗೂ ಕಾರ್ಯಕ್ರಮದ ರೂವಾರಿ ಸುವರ್ಣನ್ಯೂಸ್ ನ ವಿನೋದ ನಾಯಕ,ಕನ್ನಡಪ್ರಭ ಪತ್ರಿಕೆಯ ಜಿಲ್ಲಾ ವರದಿಗಾರರಾದ ವಸಂತಕುಮಾರ ಕತಗಾಲ, ಛಾಯಾಗ್ರಾಹಕ ಓಂಕಾರ ಉಮೇಶ ಅವರನ್ನು ಅರಣ್ಯ ಇಲಾಖೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಗಣೇಶ, ಪ್ರಕೃತಿ ಸೌಂದರ್ಯ, ದಟ್ಟ ಅರಣ್ಯಗಳು ಹಾಗೂ ಸಮೃದ್ಧ ಜೀವ ವೈವಿಧ್ಯತೆಯಿಂದ ಪ್ರಸಿದ್ಧವಾದ ದಾಂಡೇಲಿಗೆ ಆಗಮಿಸಿರುವುದು ವಿಶೇಷ ಸಂತಸ ತಂದಿದೆ ಎಂದು ಹೇಳಿದರು. ಇಲ್ಲಿನ ಪರಿಸರ ಮತ್ತು ಅರಣ್ಯ ಸಂಪತ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಈ ಭಾಗದ ಜನರು ಪ್ರಕೃತಿಯೊಂದಿಗೆ ಹೊಂದಿಕೊಂಡಿರುವ ಜೀವನಶೈಲಿ ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಇಂದು ವನ್ಯಜೀವಿ ಅಭಿಯಾನದ ರಾಯಭಾರಿಯಾಗಿ ಬಂದಿದ್ದೇನೆ. ಆದರೆ ಈ ಅರಣ್ಯ, ಪರಿಸರ ಮತ್ತು ಜೀವ ವೈವಿಧ್ಯತೆಯ ಬಗ್ಗೆ ಇಲ್ಲಿನ ಜನರಿಗೆ ನನಗಿಂತ ಹೆಚ್ಚು ಅರಿವು ಇದೆ. ಆದ್ದರಿಂದ ಈ ಕಾಡಿನ ನಿಜವಾದ ರಾಯಭಾರಿಗಳು ನೀವೇ ಎಂದು ಸಭಿಕರನ್ನು ಉದ್ದೇಶಿಸಿ ಹೇಳಿದರು.
ಅರಣ್ಯ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ಉಳಿವಿಗೆ ಜನಸಾಮಾನ್ಯರ ಸಹಭಾಗಿತ್ವ ಅತ್ಯಗತ್ಯ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಗಣೇಶ, ಪರಿಸರ ಮತ್ತು ಅರಣ್ಯ ಸಂರಕ್ಷಣೆಯ ಬಗ್ಗೆ ಬಾಲ್ಯದಲ್ಲಿಯೇ ಅರಿವು ಮೂಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದರು. ಜೊತೆಗೆ ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯವನ್ನು,ಜೊತೆಗೆ ಆರಕ್ಷಕ ಇಲಾಖೆಯನ್ನು ಶ್ಲಾಘಿಸಿದರು. ಮಾತಿನ ಕೊನೆಯಲ್ಲಿ ತಾವು ನಟಿಸಿದ ಮುಂಗಾರು ಮಳೆ ಚಲನಚಿತ್ರದ ಅನಿಸುತಿದೆ ಯಾಕೆ ಇಂದು ಹಾಡನ್ನು ಹಾಗೂ ಸಂಭಾಷಣೆಯನ್ನು ಹೇಳುವ ಮೂಲಕ ಮಕ್ಕಳ ಹಾಗೂ ನೆರೆದಿದ್ದ ಅಧಿಕಾರಿ,ಶಿಕ್ಷಕರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ವಂದನೆಯನ್ನು ಸಲ್ಲಿಸಲಾಯಿತು.