ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಹನುಮಾನಲೇನ್ ಶಾಲೆಯಲ್ಲಿ ಜೂನ್ 5 ರ ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ವೃಕ್ಷ ಮಾತೆ ಇಕೋ ಕ್ಲಬ್ ನ ಅಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು,ಪಾಲಕರು ಸೇರಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದರು.
ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅತೀವ ಉತ್ಸಾಹದಿಂದ ಪಾಲ್ಗೊಂಡರು. ಶಾಲಾ ಕೈತೋಟ ಹಾಗೂ ಆವರಣದ ಖಾಲಿ ಜಾಗದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಮಕ್ಕಳು ಪ್ರಕೃತಿ ಉಳಿಸುವ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಪ್ರಾಯೋಗಿಕವಾಗಿ ಅರಿತುಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನರವರು ಪರಿಸರ ಸಂರಕ್ಷಣೆಯ ಕುರಿತು ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪ್ರಕೃತಿಯನ್ನು ರಕ್ಷಿಸಲು ಜನರನ್ನು ಪ್ರೋತ್ಸಾಹಿಸುವುದೇ ವಿಶ್ವ ಪರಿಸರ ದಿನದ ಪ್ರಮುಖ ಉದ್ದೇಶವಾಗಿದೆ. ಹಸಿರು ಉಳಿದರೆ ಮಾತ್ರ ನಮ್ಮ ಉಸಿರು ಉಳಿಯಲು ಸಾಧ್ಯ.ಪ್ರಕೃತಿಯನ್ನು ರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಡುಗೊರೆಯಾಗಿ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಪ್ರತಿಯೊಬ್ಬರೂ ಕನಿಷ್ಠ ಒಂದೊಂದು ಗಿಡವನ್ನು ನೆಟ್ಟು, ಅದನ್ನು ಪೋಷಿಸಿ ಬೆಳೆಸಬೇಕು. ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಆಚರಣೆಯಾಗದೇ ನಿರಂತರ ಪ್ರಕ್ರಿಯೆಯಾಗಬೇಕು ಎಂದು ಕರೆ ನೀಡಿದರು. ಹೀಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಈ ಮಹತ್ಕಾರ್ಯದಲ್ಲಿ ಕೈಜೋಡಿಸಬೇಕು. ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದು ಮಾತ್ರವಲ್ಲದೆ, ನೆಟ್ಟ ಗಿಡಗಳನ್ನು ಮರವಾಗುವವರೆಗೆ ಪೋಷಿಸುವ ಜವಾಬ್ದಾರಿಯನ್ನೂ ಪ್ರತಿಯೊಬ್ಬರೂ ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿಯವರು ಪ್ರತಿಯೊಬ್ಬರೂ ಆರೋಗ್ಯಯುತ ಜೀವನ ಸಾಗಿಸಲು ಉತ್ತಮ ಪರಿಸರ ಅತ್ಯಗತ್ಯವಾಗಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ನಾಶ ಸಲ್ಲದು. ಪರಿಸರ ಸಂರಕ್ಷಣೆಗಾಗಿ ಪ್ರತಿಯೊಬ್ಬರೂ ಒಟ್ಟಾಗಿ ಮುಂದೆ ಬರಬೇಕು.
ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತ್ಯಜಿಸಬೇಕು. ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳ ಬದಲಿಗೆ ಬಟ್ಟೆ ಚೀಲಗಳನ್ನು ಬಳಸಬೇಕು ಎಂದರು.
ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಈ ವರ್ಷದ ಘೋಷವಾಕ್ಯ ಹವಾಮಾನ ಕ್ರಮ ಪ್ರಕೃತಿಯಿಂದ ಪ್ರೇರಿತ, ಹವಾಮಾನಕ್ಕಾಗಿ, ಮುಂದಿನ ಭವಿಷ್ಯಕ್ಕಾಗಿ ಆಗಿದ್ದು, ಹವಾಮಾನ ಬದಲಾವಣೆ ಇಂದು ವಿಶ್ವದ ಅತಿ ದೊಡ್ಡಸವಾಲುಗಳಲ್ಲಿ ಒಂದಾಗಿದೆ. ಮನೆಯಲ್ಲಿ ಉತ್ಪಾದನೆ ಆದ ಘನತ್ಯಾಜ್ಯಗಳನ್ನು ಹಸಿ ಕಸ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು, ತ್ಯಾಜ್ಯವನ್ನು ಕಡಿಮೆ ಮಾಡಿ, ಮರು ಬಳಕೆ ಮತ್ತು ಪುನರ್ಬಳಕೆ ಮಾಡಬೇಕು ಎಂದರು.
ಪರಿಸರ ಸಂರಕ್ಷಣೆಯಲ್ಲಿ
ವಿದ್ಯಾರ್ಥಿಗಳ ಪಾತ್ರ, ಘನತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ, ಇ-ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ ಹಾಗೂ ವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆ ಮತ್ತು ಅವುಗಳ ವೈಜ್ಞಾನಿಕ ವಿಲೇವಾರಿ ಬಗ್ಗೆ ವಿವರಿಸಿ, ಪರಿಸರ ಸ್ನೇಹಿಯಾಗಿ ಜೀವನ ನಡೆಸಿ, ಪರಿಸರವನ್ನು ಕಾಪಾಡಬೇಕು ಎಂದರು.
ಈ ಅರ್ಥಪೂರ್ಣ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದದವರಾದ ನಾಗರತ್ನಾ ಮೊಗೇರ,ಸುನಿತಾ ಆರ್,ಅನಿಸ್ ಫಾತೀಮಾ, ಸಂಜನಾ ಮಿರಾಶಿ ಶಾಲಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಉಪಸ್ಥಿತರಿದ್ದರು. ಕೊನೆಯಲ್ಲಿ ಎಲ್ಲರಿಗೂ ವಂದನೆಯನ್ನು ಸಲ್ಲಿಸಲಾಯಿತು.
