ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಕೋಟೆಮನೆ ಸಮೀಪ ಗಡಿಭಾಗದ ಚಿಪಗೇರಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್ಸಿನ ಟೈರ್ ಸ್ಪೋಟಗೊಂಡು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ಗ್ರಾಮೀಣ ಭಾಗದ ಜನರಿಗೆ ಪ್ರಮುಖ ಸಂಚಾರ ಸಾಧನವಾಗಿರುವ ಈ ಬಸ್‌ನ ಟೈಯರ್ ಏಕಾಏಕಿ ಬ್ಲಾಸ್ಟ್‌ ಆಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಆಗಿಲ್ಲ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಕೆಲಕಾಲ ರಸ್ತೆ ಬದಿಯಲ್ಲೇ ಪರದಾಡಬೇಕಾಯಿತು.

ಶಿರಸಿ ಘಟಕದಿಂದ ಚಿಪಗೇರಿ ಹಾಗೂ ಸುತ್ತಮುತ್ತಲಿನ ಹಳ್ಳಿ ಮಾರ್ಗಗಳಿಗೆ ಹಳೆಯ ಶಿಥಿಲಗೊಂಡ ಬಸ್‌ಗಳನ್ನೇ ನಿಯೋಜಿಸಲಾಗುತ್ತಿದೆ. ಅನೇಕ ಬಸ್‌ಗಳು ತಾಂತ್ರಿಕ ದೋಷಗಳಿಂದ ಬಳಲುತ್ತಿದ್ದು, ಮಧ್ಯ ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿರುವ ಬಗ್ಗೆ ಗ್ರಾಮೀಣ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳ ತಾಂತ್ರಿಕ ಸ್ಥಿತಿಯನ್ನು ಪರಿಶೀಲಿಸಿ, ಸುರಕ್ಷಿತ ಮತ್ತು ಸುಸಜ್ಜಿತ ಬಸ್‌ಗಳನ್ನು ಒದಗಿಸಬೇಕೆಂದು ಸಾರ್ವಜನಿಕರ ಪರವಾಗಿ ಶ್ರೀಕಾಂತ ನಾಯ್ಕ ಆಗ್ರಹಿಸಿದ್ದಾರೆ.