ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ:ತಾಲೂಕಿನ ಹೊಸೂರು ಶಾಲೆಯ ಶಿಕ್ಷಕಿ ಗಣತಿ ಕಾರ್ಯದ ಒತ್ತಡದ ನಡುವೆಯೇ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ಶಿಕ್ಷಕಿಯೋರ್ವರ ಮೇಲೆ ಅಕೇಶಿಯಾ ಕಟ್ಟಿಗೆ ತುಂಬಿದ್ದ ಟ್ರ್ಯಾಕ್ಟರ್ ಹರಿದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಮೃತರನ್ನು ಹೊಸೂರು ಶಾಲೆಯ ಶಿಕ್ಷಕಿ, ಬಿದ್ರಕಾನ ಪ್ರೌಢಶಾಲೆಯ ಶಿಕ್ಷಕ ಜನಾರ್ಧನ ಭಟ್ಟ ಅವರ ಪತ್ನಿ ಪೂರ್ಣಿಮಾ ಭಟ್ಟ (46) ಎಂದು ಗುರುತಿಸಲಾಗಿದೆ.
ಪೂರ್ಣಿಮಾ ಅವರು ಇತ್ತೀಚಿನ ದಿನಗಳಲ್ಲಿ ಗಣತಿ ಕಾರ್ಯದಲ್ಲಿ ಸಕ್ರಿಯರಾಗಿದ್ದರು. ಅವರು ಸಿದ್ಧಪಡಿಸಿದ ವರದಿಯನ್ನು ಅಧಿಕಾರಿಗಳಿಗೆ ಸಲ್ಲಿಸಿದಾಗ, ಅಧಿಕಾರಿಗಳು ಅದನ್ನು ಕಪ್ಪು ಶಾಯಿಯಲ್ಲೇ ಸಿದ್ಧಪಡಿಸಿಕೊಡುವಂತೆ ಸೂಚಿಸಿ ವಾಪಸ್ ಕಳುಹಿಸಿದ್ದರು ಎನ್ನಲಾಗಿದೆ. ಈ ಕೆಲಸದ ಒತ್ತಡದಲ್ಲಿದ್ದ ಅವರು, ವರದಿಯನ್ನು ಪೂರ್ಣಗೊಳಿಸಿ ಬೈಕ್ ಮೇಲೆ ಕಚೇರಿಗೆ ತರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಶಿಕ್ಷಕಿಯು ಮಳವತ್ತಿಯ ಸಮೀಪ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ, ಹಠಾತ್ತನೆ ಎರಡು ದನಗಳು ಕಾದಾಡುತ್ತಾ ರಸ್ತೆಗೆ ಅಡ್ಡಬಂದಿವೆ. ಇದರಿಂದ ನಿಯಂತ್ರಣ ತಪ್ಪಿ ಶಿಕ್ಷಕಿ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂಬದಿಯಿಂದ ಅಕೇಶಿಯಾ ಕಟ್ಟಿಗೆ ಹೊತ್ತು ಬರುತ್ತಿದ್ದ ಟ್ರ್ಯಾಕ್ಟರ್ನ ಚಕ್ರ ಅವರ ದೇಹದ ಮೇಲೆ ಹರಿದ ಪರಿಣಾಮ, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಶಿಕ್ಷಕಿಯ ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ತರುತ್ತಿದ್ದಂತೆ ನೂರಾರು ಶಿಕ್ಷಕರು ಹಾಗೂ ಸಾರ್ವಜನಿಕರು ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದರು.
ಕರ್ತವ್ಯನಿಷ್ಠ ಶಿಕ್ಷಕಿಯ ಸಾವಿಗೆ ಶಿಕ್ಷಣ ವಲಯ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ತಹಸೀಲ್ದಾರ ಎಂ.ಆರ್. ಕುಲಕರ್ಣಿ, ಪೊಲೀಸ್ ಇನ್ಸ್ಪೆಕ್ಟರ್ ಜೆ.ಬಿ. ಸೀತಾರಾಮ, ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಹಾಗೂ ಪಟ್ಟಣ ಪಂಚಾಯಿತ ಮುಖ್ಯಾಧಿಕಾರಿ ಯಾಕೂಬ್ ಶೇಖ್ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
