ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ತಾಲೂಕಿನ ಕೆರೆಹೊಸಳ್ಳಿ ಗ್ರಾಮದ ನಿವಾಸಿಯಾಗಿದ್ದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ‘ರೀಲ್ಸ್ ಅಜ್ಜಿ’ ಎಂದೇ ಖ್ಯಾತಿ ಪಡೆದಿದ್ದ 93 ವರ್ಷದ ಲಕ್ಷ್ಮಿ ನಾಯ್ಕ ಅವರು ಶನಿವಾರ ವಿಧಿವಶರಾಗಿದ್ದಾರೆ. ಡ್ರಾಮಾ ಜೂನಿಯರ್ಸ್ ಖ್ಯಾತಿಯ ಸೂರಜ್ ಆಚಾರಿ ಅವರ ಮುತ್ತಜ್ಜಿಯಾಗಿದ್ದ ಇವರು ತಮ್ಮ ಮುಗ್ಧ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಲಕ್ಷ್ಮಿ ನಾಯ್ಕ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಶನಿವಾರದಂದು ತಮ್ಮ 93ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಒಬ್ಬ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಡ್ರಾಮಾ ಜೂನಿಯರ್ಸ್ ವೇದಿಕೆ ಮೂಲಕ ಮನೆಮಾತಾಗಿರುವ ಯೂಟ್ಯೂಬರ್‌ ಸೂರಜ್ ಆಚಾರಿ ಅವರಿಗೆ ಇವರು ಮುತ್ತಜ್ಜಿಯಾಗಬೇಕು. ಅಜ್ಜಿಗೆ ಇಳಿ ವಯಸ್ಸಿನಲ್ಲಿ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ ಮತ್ತು ಕಿವಿ ಕೂಡ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ. ಆದರೂ ತಮ್ಮ ಮರಿಮೊಮ್ಮಗ ಸೂರಜ್ ಹೇಳಿಕೊಡುತ್ತಿದ್ದಂತೆ ಅದ್ಭುತವಾಗಿ ನಟಿಸುವ ಮೂಲಕ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಲೆಕ್ಕವಿಲ್ಲದಷ್ಟು ರೀಲ್ಸ್‌ಗಳನ್ನು ಮಾಡಿದ್ದರು. ಅವರ ಮುಗ್ಧ ಅಭಿನಯ ಮತ್ತು ಉತ್ಸಾಹವು ಎಲ್ಲಾ ವಯಸ್ಸಿನ ವೀಕ್ಷಕರಿಂದಲೂ ಭಾರೀ ಮೆಚ್ಚುಗೆ ಹಾಗೂ ಪ್ರೀತಿಯನ್ನು ಗಳಿಸಿತ್ತು. ತಮ್ಮ ವಿಶಿಷ್ಟ ಅಭಿನಯದ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷ್ಮಿ ಅಜ್ಜಿ ಅವರು ಸೆನ್ಸೆಷನ್ ಸೃಷ್ಟಿಸುವ ಜೊತೆಗೆ ವಿಶೇಷವಾದ ಗುರುತನ್ನು ಸಂಪಾದಿಸಿದ್ದರು. ಸೂರಜ್ ಅವರು ಹಂಚಿಕೊಳ್ಳುತ್ತಿದ್ದ ಯಾವುದೇ ವಿಡಿಯೋಗಳಲ್ಲಿ ಅಜ್ಜಿ ಕಾಣಿಸದಿದ್ದರೆ, ವೀಕ್ಷಕರು ಕಾಮೆಂಟ್ ಮೂಲಕ ಅಜ್ಜಿಯನ್ನು ಹುಡುಕುವಷ್ಟರ ಮಟ್ಟಿಗೆ ಅವರು ಜನಪ್ರಿಯರಾಗಿದ್ದರು. ಇದೀಗ ಅವರ ಅಗಲಿಕೆಯ ಸುದ್ದಿ ಕೇಳಿ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸುತ್ತಿದ್ದಾರೆ.