ಸುದ್ದಿ ಕನ್ನಡ ವಾರ್ತೆ
ಭಟ್ಕಳ:ತಾಲೂಕಿನ ಪ್ರತಿ ವರ್ಷ ರಾಮನವಮಿಯಂದು ಜರಗುವ ಪಟ್ಟಣದ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಬ್ರಹ್ಮ ರಥೋತ್ಸವ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಹರ್ಷೋದ್ಘಾರದೊಂದಿಗೆ ನಡೆಯಿತು.
ಯುಗಾದಿಯಂದು ಧ್ವಜಾರೋಹಣದ ಮೂಲಕ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಗರುಡನ ಪಟವನ್ನು ಕಟ್ಟುವ ಮೂಲಕ ಚಾಲನೆ ನೀಡಲಾಗಿತ್ತು. ಶ್ರೀ ದೇವರ ಉತ್ಸವ ಮೂರ್ತಿಯನ್ನು ಪ್ರತಿ ದಿನವೂ ಕೂಡಾ ಒಂದೊಂದು ವಾಹನದಲ್ಲಿ ಉತ್ಸವ ನೆರವೇರಿಸುವ ಮೂಲಕ ಜಾತ್ರಾಧಾರ್ಮಿಕ ಕಾರ್ಯಕ್ರಮಗಳು ಮುಂದುವರಿದ್ದವು. ಬುಧವಾರ ಹಾಗೂ ಗುರುವಾರ ರಾತ್ರಿ ಹೂವಿನ ತೇರನ್ನು ಎಳೆಯಲಾಗಿತ್ತು. ಶುಕ್ರವಾರ ಬೆಳಿಗ್ಗೆ ಹನುಮಂತ ದೇವರ ಉತ್ಸವಮೂರ್ತಿಯ ರಥಾರೋಹಣದ ಮೂಲಕ ಮಹಾ ರಥೋತ್ಸವದ ವಿಧಿವಿಧಾನಗಳು ಬೆಳಿಗ್ಗೆಯಿಂದಲೇ ಆರಂಭವಾಗಿದ್ದವು. ನಂತರ ರಥ ಭಕ್ತಾದಿಗಳು ಕಾಣಿಕೆಯನ್ನು ಕಾಣಿಕೆಯನ್ನು ಸಮರ್ಪಿಸಲ್ಪಟ್ಟು ಸಂಜೆ ರಥೋತ್ಸವ ನಡೆಯಿತು.
ಶುಕ್ರವಾರ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬಂದು ದೇವರಿಗೆ ಪೂಜೆ, ರಥ ಕಾಣಿಕೆ ಸಲ್ಲಿಸುವಲ್ಲಿ ತಲ್ಲೀನರಾಗಿದ್ದು ಸಂಜೆ ನಡೆದ ರಥೋತ್ಸವದಲ್ಲಿ ತಟ್ಟಿರಾಯ, ಭಜನೆ, ಚಂದೆ ವಾದ್ಯ, ಭಜನಾ ಕುಣಿತ, ಹುಲಿ ವೇಷ ಸೇರಿದಂತೆ ವಿವಿಧ ತಂಡಗಳಿದ್ದವು.
ರಥೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಶಾಸಕ ಸುನೀಲ್ ನಾಯ್ಕ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀಧರ ಮೊಗೇರ, ಕಾರ್ಯದರ್ಶಿ ಪ್ರಕಾಶ ಪ್ರಭು. ಸದಸ್ಯರಾದ ಸುರೇಂದ್ರ ಭಟ್ಕಳ, ಗಣಪತಿ ಅಚಾರ್ಯ, ರಮೇಶ ಗೊಂಡ, ಗಿರಿಜಾ ದೇವಾಡಿಗ, ಪರಿಮಳಾ ಶೇಟ್, ಅರ್ಚಕ ಪ್ರಮೋದ ಭಟ್ಟ, ಪ್ರಮುಖರಾದ ಶಿವರಾಮ ನಾಯ್ಕ, ಶಂಕರ ಹೆಬಳೆ, ರಾಜೇಶ ನಾಯಕ, ಪ್ರದೀಪ ಪೈ, ಪದ್ಮನಾಭ ಪೈ, ಬಿಜೆಪಿ ಪ್ರಮುಖರಾದ ಲಕ್ಷ್ಮೀನಾರಾಯಣ ನಾಯ್ಕ, ಶಿವಾನಿ ಶಾಂತಾರಾಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮುಂತಾದವರು ಇದ್ದರು.
ಎಸ್‌ಪಿ ದೀಪನ್, ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ, ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಭಟ್ಕಳದ
ಪೊಲೀಸ್ ಉಪ ವಿಭಾಗದ ಉಪಾಧೀಕ್ಷಕ ಗಿರೀಶ ಅವರ ನೇತೃತ್ವದಲ್ಲಿ ನಗರ ಠಾಣೆಯ ಇನ್ಸಪೆಕ್ಟರ್ ದಿವಾಕರ ಪಿ.ಎಂ. ಇನ್ಸಪೆಕ್ಟರ್ ಸಂತೋಷ ಕಾಯ್ಕಿಣಿ,ಸಬ್ ಇನ್ಸಪೆಕ್ಟರ್ ನವೀನ ನಾಯಕ, ವಿವಿಧ ಕಡೆಗಳಿಂದ ಬಂದಿದ್ದ ಇನ್ನಪೆಕ್ಷರುಗಳು, ಸಬ್ ಇನ್ಸಪೆಕ್ಟರ್‌ಗಳು ಹಾಗೂ ಸಿವಿಲ್ ಹಾಗೂ ರಿಸರ್ವ ಪೊಲೀಸರು ಬಂದೋಬಸ್ತ ಕಾರ್ಯ ನೆರವೇರಿಸಿದ್ದರು.
ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥಕ್ಕೂ ಪೂರ್ವದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು, ಊರಿನ ಪ್ರಮುಖರು ವಾದ್ಯದೊಂದಿಗೆ ಮುಸ್ಲಿಂ ಸಮುದಾಯದ ಚರ್ಕಿನ್ ಕುಟುಂಬ, ಜೈನ ಕುಟುಂಬ ಮತ್ತು ಪ್ರಭು ಕುಟುಂಬದವರಿಗೆ ಜಾತ್ರೆಗೆ ಆಗಮಿಸುವಂತೆ ಅಮಂತ್ರಣ ನೀಡಿದರು.
