ಸುದ್ದಿ ಕನ್ನಡ ವಾರ್ತೆ
ಭಟ್ಕಳ: ತಾಲೂಕಿನ ಎಡಬಡ್ರು ಕ್ರಾಸಿನ ಬಳಿ ಟಿಪ್ಪರ ಬೈಕಿಗೆ ಗುದ್ದಿದ ಕಾರಣ ಬೈಕ್ ಸವಾರರೊಬ್ಬರು ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮೃತ ಬೈಕ್ ಸವಾರ ತಾಲೂಕಿನ ಮುರುಡೇಶ್ವರದ ಹಿರೆದೋಮಿ ನಿವಾಸಿ ನಾಗರಾಜ ಸುಕ್ರಾ ಹರಿಕಾಂತ(21) ಅಪಘಾತದಲ್ಲಿ ಸಾವನಪ್ಪಿದ್ದಾರೆ. ಈತನು ಮೀನುಗಾರಿಕೆ ನಡೆಸಿಕೊಂಡು ಜೀವನ ನಡೆಸುತ್ತಿದ್ದ ಎನ್ನಲಾಗಿದೆ.
ಹೊನ್ನಾವರ ತಾಲೂಕಿನ ಮಂಕಿ ಅನಂತವಾಡಿಯ ದಿನೇಶ ರಾಮಚಂದ್ರ ನಾಯ್ಕ (35) ಟಿಪ್ಪರ್ ಚಲಾಯಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 66 ರ ಹೊನ್ನಾವರ- ಭಟ್ಕಳ ರಸ್ತೆಯಲ್ಲಿ ಮೃತ ಬೈಕ್ ಸವಾರ ಬೈಕ್ ಚಲಾಯಿಸುತ್ತಿದ್ದಾಗ ಟಿಪ್ಪರ್ ಗುದ್ದಿದೆ.
ಮಾರ್ಚ್17 ರ ಬೆಳಿಗ್ಗೆ 9 ಗಂಟೆಗೆ ಹೊನ್ನಾವರ ಕಡೆಯಿಂದ ಮುರ್ಡೇಶ್ವರ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿ ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯ ಅವಘಡಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ ನಾಗರಾಜ ಅವರ ಬೈಕ್ಗೆ ಟಿಪ್ಪರ್ ಭಾಗದಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ನಾಗರಾಜ ಅವರು ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದು ತಲೆಗೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗೊಂಡಿದ್ದಾರೆ.
ತಕ್ಷಣ ಅವರನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಈ ಸಂಬಂಧ ಹಿರೇದೋಮಿಯ ಹೇಮಂತ ನಾರಾಯಣ ಹರಿಕಾಂತ ಅವರು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಟಿಪ್ಪರ್ ಚಾಲಕ ದಿನೇಶ ರಾಮಚಂದ್ರ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
