ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಕಳಚೆ ಸಮೀಪದ ಮಾನಿಗದ್ದೆ ಕುಂಬ್ರಿ ಬಳಿ ಕೆ.ಎಸ್.ಆರ್.ಟಿ.ಸಿ. ಬಸ್
ಬ್ರೇಕ್ ತಾಗದೇ ರಸ್ತೆ ಬದಿಯ ಗುಡ್ಡಕ್ಕೆ ಡಿಕ್ಕಿಯಾದ ಘಟನೆ ನಡೆದಿದೆ. ಸಂಜೆ 4ಕ್ಕೆ ಯಲ್ಲಾಪುರದಿಂದ ಕಳಚೆಗೆ ಹೊರಟಿದ್ದ ಬಸ್ ಮಾನಿಗದ್ದೆ ಕುಂಬ್ರಿ ಸಮೀಪ ಭೂಕುಸಿತವಾದ ಸ್ಥಳದಲ್ಲಿರುವ ಇಳಿಜಾರಿನ ದೊಡ್ಡ ತಿರುವಿನಲ್ಲಿ ಬ್ರೇಕ್ ತಾಗದೇ ವೇಗವಾಗಿ ಮುಂದಕ್ಕೆ ಸಾಗಿದೆ. ರಸ್ತೆ ಪಕ್ಕದ ಮಣ್ಣು ಗುಡ್ಡೆಗೆ ಹೊಡೆದು ಬಸ್ ನಿಂತಿದೆ. ಬಸ್ ಅಲ್ಲಿ ನಿಲ್ಲದೇ ಮುಂದಕ್ಕೆ ಸಾಗಿದ್ದರೆ ದೊಡ್ಡದಾದ ಪ್ರಪಾತಕ್ಕೆ ಬಿದ್ದು, ಭಾರಿ ಅನಾಹುತವೇ ಉಂಟಾಗುತ್ತಿತ್ತು. ಬಸ್‌ನಲ್ಲಿ 19 ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಬಸ್‌ನ ಮುಂಭಾಗ ಸ್ವಲ್ಪ ಜಖಂಗೊಂಡಿದೆ. ಬಸ್ ಚಾಲಕ ಬ್ರೇಕ್ ಫೇಲ್ ಆಗಿಲ್ಲ, ಆದರೆ ಬ್ರೇಕ್ ತಾಗಿಲ್ಲ ಎಂದು ಹೇಳುತ್ತಿದ್ದಾರೆ.
ಏನೇ ಆದರೂ, ಅದೃಷ್ಟವಶಾತ್ ದೊಡ್ಡ ಅಪಘಾತವೊಂದು ತಪ್ಪಿದೆ. ಕಳಚೆ ಬಸ್ ಹಾಳಾಗುವುದು, ಬ್ರೇಕ್ ಫೇಲ್ ಆಗುವುದು ಇತ್ತೀಚಿನ ದಿವಸಗಳಲ್ಲಿ ಹೆಚ್ಚುತ್ತಿದೆ. ಅಲ್ಲಲ್ಲಿ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದ್ದು, ಎರಡು ತಿಂಗಳ ಹಿಂದಷ್ಟೇ ಬಸ್ ಹಾಳಾಗಿ ಟ್ರ್ಯಾಕ್ಟರ್ ಮೂಲಕ ಎಳೆದು ಮೇಲಕ್ಕೆ ತರಲಾಗಿತ್ತು. ತಿಂಗಳ ಹಿಂದಷ್ಟೇ ಬಸ್‌ನ ಬ್ರೇಕ್ ಫೇಲ್ ಆಗಿ, ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿದಿತ್ತು.
