ಸುದ್ದಿ ಕನ್ನಡ ವಾರ್ತೆ
ಕಾರವಾರ: ತಾಲೂಕಿನ ಹಳಗಾ ಗ್ರಾಮದಲ್ಲಿ ಆಹಾರ ಅರಸಿ ಬಂದಿದ್ದ ಚಿರತೆಯೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದು ಪಜೀತಿ ಅನುಭವಿಸಿದ ಘಟನೆ ನಡೆದಿದೆ. ಕಾಡಿನಿಂದ ನಾಡಿನತ್ತ ಮುಖ ಮಾಡಿದ್ದ ಈ ಚಿರತೆ, ರಾತ್ರಿಯ ಕತ್ತಲಲ್ಲಿ ಬಾವಿಯ ಆಳಕ್ಕೆ ಬಿದ್ದಿದೆ.

ಶುಕ್ರವಾರ ಮುಂಜಾನೆ ಗ್ರಾಮಸ್ಥರು ಬಾವಿಯ ಬಳಿ ಹೋದಾಗ ಚಿರತೆಯು ಬಾವಿಯೊಳಗೆ ಬಿದ್ದಿರುವುದು ಬೆಳಕಿಗೆ ಬಂದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಚಿರತೆಯನ್ನು ನೋಡಲು ಜನಜಂಗುಳಿ ಸೇರಿತ್ತು. ಇದನ್ನು ಗಮನಿಸಿದ ಸ್ಥಳೀಯರು ಚಿರತೆ ರಕ್ಷಣೆ ಮಾಡುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಮಾಹಿತಿ ನೀಡಿದ ಬಳಿಕ ಸ್ಥಳಕ್ಕಾಗಮಿಸಿ ಅರಣ್ಯ ಇಲಾಖೆಯವರು ಬಾವಿಗೆ ಏಣಿ ಬಿಟ್ಟರು. ತಕ್ಷಣ ಚಾಣಾಕ್ಷ ಚಿರತೆ ಬಾವಿಯಿಂದ ಏಣಿ ಏರಿ ಜಿಗಿದು ಕಾಡಿನತ್ತ ಪ್ರಯಾಣ ಬೆಳಸಿತು.ಗ್ರಾಮದ ಜನವಸತಿ ಪ್ರದೇಶದೊಳಗೆ ಚಿರತೆ ಬಂದಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದ್ದು, ಅರಣ್ಯ ಇಲಾಖೆಯು ಈ ಭಾಗದಲ್ಲಿ ಗಸ್ತು ಹೆಚ್ಚಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.