ಸುದ್ದಿ ಕನ್ನಡ ವಾರ್ತೆ
ಭಟ್ಕಳ: ನೂರು ವರ್ಷಗಳ ಹಿಂದೆ ನಾಗಪುರದಲ್ಲಿ ಕೇವಲ ಕೆಲವೇ ಕೆಲವರು ಸೇರಿಕೊಂಡು ಹುಟ್ಟು ಹಾಕಿದ ಆರ್.ಎಸ್.ಎಸ್. ಇಂದು ಜಗತ್ತೇ ಒಪ್ಪಿಕೊಳ್ಳುವಂತೆ ಆಗಿದೆ ಎಂದು ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಅವರು ಹಿಂದೂ ಸಮಾಜ ಭಟ್ಕಳದಲ್ಲಿ ಏರ್ಪಡಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಅಂದಿನ ಆರ್.ಎಸ್.ಎಸ್.ಗೂ ಇಂದಿನ ಆರ್.ಎಸ್.ಎಸ್.ಗೂ ಅಜಗಜಾಂತರ ವ್ಯತ್ಯಾಸವಿದೆ. ಹಿಂದೂ ಸಮಾಜದ ಜಾಗೃತಿ ಇಂದು ಜಗತ್ತಿಗೇ ತಲುಪಿದೆ ಎಂದೂ ಹೇಳಿದ ಅನಂತಕುಮಾರ್ ಹೆಗಡೆ ಜಗತ್ತು ಭಾರತವನ್ನು ಅತ್ಯಂತ ಗೌರವದಿಂದ ಕಾಣುತ್ತದೆ ಎಂದರೆ ಅದು ಆರ್.ಎಸ್.ಎಸ್.ನ ಕೊಡುಗೆ ಎಂದರು.
ಭಾರತ ಮೊದಲಿನಿಂದಲೂ ಜಗತ್ತಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ವಿವಿಧ ದೇಶಗಳಲ್ಲಿ ನಾಗರೀಕತೆ ಬೆಳಗಿದಿದ್ದರೆ ಅದು ಭಾರತದಿಂದ, ಜಗತ್ತಿಗೆ ಆಯುರ್ವೇದವನ್ನು, ಗಣಿತವನ್ನು, ವಿಜ್ಞಾನವನ್ನು ಹಾಗೂ ಖಗೋಳ ಶಾಸ್ತçವನ್ನು ಸಹ ನೀಡಿದ ಭಾರತ ಇಂದು ವಿಶ್ವದೆಲ್ಲೆಡೆ ಯೋಗವನ್ನು ಅಳವಡಿಸಕೊಳ್ಳುವಂತೆ ಮಾಡಲು ಯಶಸ್ವೀಯಾಗಿದೆ ಎಂದರು.
ಹಿಂದು ಸಮಾಜದಲ್ಲಿ ಭಾಷೆ, ಜಾತಿ, ಗುಂಪು ಯಾವುದೂ ಮುಖ್ಯವಾಗುವುದಿಲ್ಲ, ನಾವೆಲ್ಲ ಹಿಂದೂಗಳು ಎನ್ನುವುದು ಮಾತ್ರ ಮುಖ್ಯವಾಗುತ್ತದೆ ಎಂದ ಅವರು ಯಾವುದೇ ಸಂದರ್ಭದಲ್ಲಿ ನಮ್ಮನ್ನು ಕರೆದಾಗ ನಾನೋರ್ವ ಹಿಂದೂ ಎಂದು ಹೋಗಬೇಕು ಎಂದು ವಿನಂತಿ ಮಾಡಿದ ಅವರು ಸಮಾಜದ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಭಾಗಿಗಳಾಗಬೇಕು ಎಂದು ಕರೆ ನೀಡಿದರು.
ಇಂದು ಭಾರತಕ್ಕೆ ಇಡೀ ಜಗತ್ತೇ ತಲೆಬಾಗುತ್ತಿದೆ, ಆದರೆ ಭಾರತವನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದ್ದರೂ ಸಹ ನಮ್ಮ ದೇಶ ಕಂಡು ಕೇಳರಿಯದ ವೇಗದಲ್ಲಿ ಮುನ್ನೆಡೆಯುತ್ತಿದೆ ಎಂದೂ ಹೇಳಿ ಅವರು ಭಾರತದ ಇತಿಹಾಸವನ್ನೇ ತಿರುಚಿ ತಿರುಚಿ ನಮಗೆ ಹೇಳಲಾಗಿದೆ. ಜಗತ್ತಿನ ಮಹಾ ದಂಡನಾಯಕ ಯಾರೆಂದು ಕೇಳಿದರೆ ಅದು ಕಾಶ್ಮೀರದ ಲಲಿತಾದಿತ್ಯ. ಈತ ಜಗತ್ತನ್ನೇ ಗೆದ್ದು ಬಂದಿದ್ದ ಎಂದ ಅವರು ಆತ ಇಡಿಗ ಸಮುದಾಯದ ರಾಜನೆನ್ನುವುದು ವಿಶೇಷ ಎಂದರು.
ನಾವು ಜಗತ್ತನ್ನೇ ಮೆಟ್ಟಿ ನಿಂತವರು ಎನ್ನುವ ಕಲ್ಪನೆ ನಮಗಿಲ್ಲ, ಬೇರೆಯವರ ಇತಿಹಾಸವನ್ನು ನೋಡಿ ಅದುವೇ ಶ್ರೇಷ್ಠ ಎಂದು ಬಿಂಬಿಸಿದ್ದರಿAದ ಅದನ್ನೇ ನಂಬಿಕೊAಡು ಬಂದವರು ನಾವು. ಅದಕ್ಕಾಗಿಯೇ ೧೦೦ ವರ್ಷಗಳ ಹಿಂದೆ ಆರ್.ಎಸ್.ಎಸ್. ಹುಟ್ಟಿಕೊಂಡಿದೆ. ಅದನ್ನು ಮಟ್ಟ ಹಾಕುತ್ತೇವೆ, ಮುಗಿಸಿ ಬಿಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವವರು ಮಿಣುಕು ಹುಳ ಇದ್ದಂತೆ, ಬೆಳಿಗ್ಗೆ ಎದ್ದು ಕೂಗುವ ಕೋಳಿ ಇದ್ದಂತೆ. ಆರ್.ಎಸ್.ಎಸ್. ಸದೃಢವಾಗಿದೆ ಅದನ್ನು ಜಗತ್ತಿನ ಯಾರೂ ಕೂಡಾ ತಡೆಯಲಾರರು. ಜಗತ್ತಿನ ಯಾರಿಗೂ ಕೂಡಾ ಹಿಂದೂ ಸಮಾಜವನ್ನು ಹಿಮ್ಮೆಟ್ಟಿಸುವ ತಾಕತ್ತು ಇಲ್ಲ ಎಂದ ಅವರು ತಾಕತ್ತಿದ್ದರೆ ಆರ್.ಎಸ್.ಎಸ್.ನ್ನು ನಿಲ್ಲಿಸಿ ನೋಡೋಣ ಎಂದು ಸವಾಲು ಹಾಕಿದರು.
ನಾವು ದುರ್ಬಲರಾಗಿರುವ ತನಕ ನಮ್ಮನ್ನು ತುಳಿಯುವವರಿರುತ್ತಾರೆ, ತಲೆ ಎತ್ತಿ ನಿಂತರೆ ಯಾರೂ ನಮ್ಮನ್ನು ತಡೆಯಲಾರರು ಎಂದು ಹೇಳಿದರು.
ಹಿಂದೂಗಳಿದ್ದಲ್ಲಿ ಶಾಂತಿಯಿದೆ ಎಂದ ಅವರು ತಮ್ಮದು ಶಾಂತಿಯ ಧರ್ಮ ಎನ್ನುವವರು ಎಲ್ಲಿ ಇದ್ದಾರೆ. ಜಗತ್ತಿನ ಯಾವ ಇಸ್ಲಾಂ ದೇಶದಲ್ಲಿ ಇಂದು ಶಾಂತಿಯಿದೆ ಎಂದು ಪ್ರಶ್ನಿಸಿದ ಅವರು ಭಾರತದಲ್ಲಿ ಶಾಂತಿಯಿದ್ದರೆ ಜಗತ್ತಿನೆಲ್ಲೆಡೆ ಶಾಂತಿ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದೂ ಅವರು ಹೇಳಿದರು.
ಹಿಂದೂಗಳು ತಾಯಿ ನೆಲವನ್ನು ಪೂಜಿಸುವವರು, ಯಾವ ದೇಶದಲ್ಲಿ ನಾವಿರುತ್ತೇವೆಯೋ ಅಲ್ಲಿನ ನೆಲವನ್ನು ಪೂಜಿಸುತ್ತೇವೆ. ಅಮೇರಿಕದಲ್ಲಿನ ಭಾರತೀಯರು ದೇಶವನ್ನು ಕಟ್ಟುವನ್ನು ಪ್ರಮುಖ ಪಾತ್ರ ವಹಿಸಿದ್ದಾರೆ. ಯಾವುದೇ ದೇಶದಲ್ಲಿರಲಿ ಅಲ್ಲಿನ ಸಂಸ್ಕೃತಿಯನ್ನು ನೆಲವನ್ನು ಗೌರವಿಸುವ ಧರ್ಮ ನಮ್ಮದು ಎಂದರು.
ಬ್ರಾಹ್ಮಣ್ಯದ ಬಗ್ಗೆ ಇಂದು ಬಹು ಚರ್ಚೆ ನಡೆಯುತ್ತಿದೆ. ಮನುಸ್ಮçತಿಯನ್ನು ಓದಿದವರು ಯಾರೂ ಕೂಡಾ ಚರ್ಚೆ ಮಾಡುತ್ತಿಲ್ಲ. ಕಾರಣ ನಮ್ಮಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ. ನಮ್ಮ ಋಷಿಮುನಿಗಳಲ್ಲಿ ಶೇ.೯೦ರಷ್ಟು ಋಷಿಮುನಿಗಳು ಬ್ರಾಹ್ಮಣರೇ ಅಲ್ಲ, ಜಾತಿಯಿಂದ ಯಾರನ್ನು ಗುರುತಿಸಿಲ್ಲ, ಅವರ ಯೋಗ್ಯತೆಯಿಂದ ಗುರುತಿಸಲಾಗಿದೆ ಎಂದರು.
ಹಲವರಿಗೆ ನಿರಾಸೆ: ಅನಂತಕುಮಾರ್ ಹೆಗಡೆಯವರು ಬರುತ್ತಾರೆ, ರಾಜಕೀಯದ ಮರು ಪ್ರವೇಶದ ಬಗ್ಗೆ ಮಾತನಾಡುತ್ತಾರೆ ಎನ್ನುವ ಆಸೆಯನ್ನಿಟ್ಟುಕೊಂಡು ಬಂದ ಕಾರ್ಯಕರ್ತರನೇಕರಿಗೆ ಬೇಸರವಾಗಿದೆ. ತಮ್ಮ ಸುಮಾರು ೪೫ ನಿಮಿಷದ ಭಾಷಣದಲ್ಲಿ ಎಲ್ಲಿಯೂ ರಾಜಕೀಯದ ಕುರಿತು ಮಾತನಾಡದ ಅವರು ಕೇವಲ ಹಿಂದುತ್ವ, ಆರ್.ಎಸ್.ಎಸ್. ಬಗ್ಗೆ ಮಾತ್ರ ಮಾತನಾಡಿದರು. ಅನಂತಕುಮಾರ್ ಹೆಗಡೆಯವರು ನಿರ್ಗಮಿಸುವ ವೇಳೆಯಲ್ಲಿ ಮುಂದಿನ ಮುಖ್ಯ ಮಂತ್ರಿ ಅನಂತಕುಮಾರ್ ಹೆಗಡೆ ಎನ್ನುವ ಘೋಷಣೆ ಕೇಳಿ ಬಂತು.
