ಸುದ್ದಿ ಕನ್ನಡ ವಾರ್ತೆ
ರಾಜ್ಯದ ಜನತೆಯ ಮೇಲೆ ಹೊಸದಾಗಿ 1. 32 ಲಕ್ಷ ಕೋಟಿ ಸಾಲವನ್ನು ಹೆಚ್ಚಿಸಿದ್ದನ್ನು ಬಿಟ್ಟರೆ ರಾಜ್ಯದ ಅಭಿವೃದ್ಧಿಯ ಕುರಿತಾಗಿ ಯಾವುದೇ ಚಿಂತನೆ ಇಲ್ಲದ ಬಜೆಟ್ ಅನ್ನು ಸಿದ್ದರಾಮಯ್ಯನವರು ಮಂಡಿಸಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರರಾದ ಸದಾನಂದ ಭಟ್ ನಿಡುಗೋಡ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಜಿ ಎಸ್ ಟಿ ಕಡಿಮೆಗೊಳಿಸಿದ್ದರಿಂದ ಜನತೆಗೆ ನೇರವಾಗಿ ದೊಡ್ಡ ಲಾಭವಾದರೂ ಇದು ರಾಜ್ಯದ ರಾಜಸ್ವ ಕೊರತೆಗೆ ಮೂಲ ಕಾರಣ ಎಂದು ಎಂದಿನಂತೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿರುವ ಮುಖ್ಯಮಂತ್ರಿಗಳ ಬಜೆಟ್ ನಿರಾಸೆಯನ್ನು ಮೂಡಿಸಿದೆ. ರಾಜ್ಯದ ಬಂಡವಾಳ ಅಭಿವೃದ್ಧಿಗೆ ಕೇವಲ 74,000 ಕೋಟಿಯನ್ನು ನೀಡಿ ಒಂದು ಲಕ್ಷ ಕೋಟಿಗಳ ವಿತ್ತೀಯ ಕೊರತೆ ಇರುವ ಕರ್ನಾಟಕದ ಬಜೆಟ್ ನ್ನು ಸಮರ್ಥನೆ ಮಾಡಿಕೊಳ್ಳುತ್ತಾ ಮುಖ್ಯಮಂತ್ರಿಗಳು ಆರ್ಥಿಕ ಶಿಸ್ತನ್ನು ಪಾಲಿಸಿದ್ದೇವೆ ಎಂದು ತನಗೆ ತಾನೇ ಪ್ರಮಾಣ ಪತ್ರ ನೀಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ 138 ಕೋಟಿ ಖರ್ಚು ಮಾಡಿದ್ದೇವೆ ಎನ್ನುತ್ತಾ ಈಗ ಒಂದು ನೂರು ಕೋಟಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತೇವೆ ಎಂದು ಘೋಷಿಸಿರುವುದು ಉತ್ತರ ಕನ್ನಡ ಜಿಲ್ಲೆಯ ಬಹುದಿನದ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸದೆ ನಿರೀಕ್ಷೆಯಂತೆ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ. ಶಿರಸಿಯಲ್ಲಿ ಜಿಲ್ಲಾ ಆಸ್ಪತ್ರೆಯ ಸ್ಥಾಪನೆಯ ಕುರಿತು ಯಾವುದೇ ಅನುದಾನ ನೀಡದಿರುವುದು ಅಕ್ಷಮ್ಯ.
ಕೇವಲ ಅಂಕೆ ಸಂಖ್ಯೆಗಳ ಲೆಕ್ಕಾಚಾರದ ಬಜೆಟ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ವ್ಯಾಪಕ ಸಮಸ್ಯೆಯಾದ ಎಲೆ ಚುಕ್ಕಿ ರೋಗ, ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಯಾವುದೇ ವಿಶೇಷ ಕಾಳಜಿ ವಹಿಸದೆ ಇರುವುದು ನಿರಾಸೆ ಉಂಟು ಮಾಡಿದೆ. ಗ್ರಾಮೀಣ ಅಭಿವೃದ್ಧಿಗೆ ಅತ್ಯಂತ ಅಗತ್ಯವಾಗಿದ್ದ ಕೇಂದ್ರ ಸರಕಾರದ ವಿಬಿಜಿ ರಾಮಜಿ ಯೋಜನೆಯನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸುವ ಕಾಂಗ್ರೆಸ್ ರಾಜ್ಯದಲ್ಲಿ ಈ ಯೋಜನೆಯ ಅನುಷ್ಠಾನದ ಕುರಿತು ತಮ್ಮ ಪಾಲಿನ ಹಣವನ್ನು ಮೀಸಲಿಡದೆ ಕೇಂದ್ರದಿಂದ ರಾಜ್ಯಕ್ಕೆ ದೊರಕಬೇಕಾಗಿದ್ದ ದೊಡ್ಡ ಅನುದಾನ ಬರದಿರಲು ಕಾರಣೀಕರ್ತರಾಗುತ್ತಿದ್ದಾರೆ. ರಾಜಕೀಯ ಹಗೆತನ ಸಾಧಿಸುತ್ತಿರುವ ಕಾಂಗ್ರೆಸ್ ತಾಕತ್ತಿದ್ದಿದ್ದರೆ ರಾಜ್ಯಕ್ಕೆ ತಮ್ಮದೇ ಅನುದಾನದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಬಹುದಿತ್ತು. ಆದರೆ ಈ ರೀತಿ ಮಾಡದಿರುವುದರಿಂದ ಕರ್ನಾಟಕ ರಾಜ್ಯದ ಗ್ರಾಮೀಣ ಅಭಿವೃದ್ಧಿಗೆ ಚೇತರಿಸಿಕೊಳ್ಳಲಾಗದ ಕೊಡಲಿ ಏಟನ್ನು ನೀಡಿದೆ. ಕಾಂಗ್ರೆಸ್ಸಿನ ಸಾಧನೆ ಎನ್ನುತ್ತಿದ್ದ ಗ್ಯಾರಂಟಿ ಗಳಲ್ಲಿ ಯುವನಿಧಿಗೆ ಯಾವುದೇ ಅನುದಾನ ನೀಡದೆ, ಅನ್ನಭಾಗ್ಯ ಯೋಜನೆಯ ಬದಲು ಇಂದಿರಾಕಿಟ್ ನೀಡುತ್ತೇವೆ ಎಂದಿರುವುದು ರಾಜ್ಯ ಕಾಂಗ್ರೆಸ್ ಸರಕಾರ ಯುವಜನರ ಮತ್ತು ಬಡ ಜನತೆಗೆ ಮಾಡಿದ ಮೋಸವಾಗಿದೆ. ಹಲವಾರು ಯೋಜನೆಗಳನ್ನು ಘೋಷಿಸಿ ಮುಂದಿನ ಮೂರು ವರ್ಷದಲ್ಲಿ ಮಾಡುತ್ತೇವೆ ಎಂದಿರುವುದು ಕೇವಲ ರಾಜಕೀಯ ತಂತ್ರವಾಗಿದೆ.
ಒಟ್ಟಿನಲ್ಲಿ ಯಾವುದೇ ಆರ್ಥಿಕ ಶಿಸ್ತು ಇಲ್ಲದ ಕೇವಲ ದಾಖಲೆ ಗೋಸ್ಕರ ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯ ಸರ್ಕಾರದ ಬಜೆಟ್ ರಾಜ್ಯದ ಭವಿಷ್ಯದ ದೃಷ್ಟಿ ಇಂದ ನಿರಾಸೆ ತಂದಿದೆ ಎಂದು ಸದಾನಂದ ಭಟ್ ನಿಡುಗೋಡ್ ನುಡಿದಿದ್ದಾರೆ.
