ಸುದ್ದಿ ಕನ್ನಡ ವಾರ್ತೆ

. ಶಿರಸಿ:ನಗರದ ದಕ್ಷಿಣ ಭಾರತದ ಸುಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವವು ಏಳನೇ ದಿನವಾದ ಸೋಮವಾರ ನಿರೀಕ್ಷೆಗೂ ಮೀರಿದ ಭಕ್ತ ಸಮೂಹ ಅಮ್ಮನ ದರ್ಶನಕ್ಕಾಗಿ ಹರಿದುಬಂದಿತ್ತು. ಮಂಗಳವಾರ ಚಂದ್ರಗ್ರಹಣವಿರುವ ಕಾರಣ, ಸೋಮವಾರವೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ವಾರಾಂತ್ಯದ ದಿನಗಳನ್ನು ಮೀರಿಸುವಂತಹ ಜನದಟ್ಟಣೆ ನಗರದಲ್ಲಿ ಕಂಡುಬಂದಿತು.

ಸೋಮವಾರ ಮುಂಜಾನೆ 5 ಗಂಟೆಯಿಂದಲೇ ದೇವಿಯ ಗದ್ದುಗೆಯ ಬಳಿ ಸೇವಾ ಕಾರ್ಯಗಳು ಆರಂಭಗೊಂಡವು.
ಹಣ್ಣು-ಕಾಯಿ ಅರ್ಪಣೆ, ಉಡಿ ತುಂಬುವುದು ಸೇರಿದಂತೆ ವಿವಿಧ ಹರಕೆಗಳನ್ನು ತೀರಿಸಲು ಭಕ್ತರು ನೂಕುನುಗ್ಗಲಿನಲ್ಲಿ ಪಾಲ್ಗೊಂಡಿದ್ದರು. ವಿಐಪಿ ಪಾಸ್ ಹೊಂದಿದ್ದವರೂ ಸಹ ದೇವಿಯ ದರ್ಶನಕ್ಕಾಗಿ ಎರಡು-ಮೂರು ಗಂಟೆಗಳ ಕಾಲ ಸುದೀರ್ಘ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಇತ್ತು. ದರ್ಶನ ಪಡೆದ ಭಕ್ತರು ಧನ್ಯತಾ ಭಾವ ವ್ಯಕ್ತಪಡಿಸಿದರು.
ಮತ್ತೊಂದೆಡೆ, ನಗರದ ಕೋಟೆಕೆರೆ ಆವರಣದಲ್ಲಿ ನಿರ್ಮಿಸಲಾಗಿರುವ ಬೃಹತ್ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಮೋಜಿನ ಆಟಿಕೆಗಳತ್ತ ಜನ ಮುಗಿಬಿದ್ದಿದ್ದರು. ವಿವಿಧ ಬಗೆಯಜೋಕಾಲಿಗಳು ಹಾಗೂ ಆಟಿಕೆಗಳನ್ನು ಆಸ್ವಾದಿಸಲು ಜನರು ನೂಕುನುಗ್ಗಲಿನಲ್ಲಿ ಭಾಗವಹಿಸಿದ್ದು ಕಂಡುಬಂದಿತು.ಬುಧವಾರ ಈ ಬಾರಿಯ ವೈಭವದ ಜಾತ್ರೆಗೆ ಅಧಿಕೃತ ತೆರೆ ಬೀಳಲಿದೆ. ಬುಧವಾರ ಮುಂಜಾನೆ 10 ಗಂಟೆಯವರೆಗೆ ಮಾತ್ರ ಭಕ್ತರಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ನಂತರ ರಥೋತ್ಸವದ ಮೂಲಕ ದೇವಿ ಗದ್ದುಗೆಯಿಂದ ನಿರ್ಗಮಿಸಲಿದ್ದಾರೆ. ಅಲ್ಲಿಂದ ಜಾತ್ರೆ ಮುಕ್ತಾಯಗೊಂಡು, ಯುಗಾದಿಯ ದಿನದಂದು ದೇವಾಲಯದಲ್ಲಿ ದೇವಿಯ ಮರು ಪ್ರತಿಷ್ಠಾಪನೆಯಾದ ಬಳಿಕವಷ್ಟೇ ಭಕ್ತರಿಗೆ ಎಂದಿನಂತೆ ದರ್ಶನ ಲಭ್ಯವಾಗಲಿದೆ.

ಶ್ರೀಸಂಸ್ಥಾನ ಗೋಕರ್ಣ ಜೀವೋತ್ತಮ ಪರ್ತಗಾಳಿ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ವಡೇರ ಸ್ವಾಮೀಜಿ ಹಾಗೂ ಶ್ರೀಸಂಸ್ಥಾನ ಕೈವಲ್ಯ ಮಠಾಧೀಶರಾದ ಶ್ರೀಶಿವಾನಂದ ಸರಸ್ವತಿ ಸ್ವಾಮೀಜಿಗಳು ಶಿರಸಿಯ ಜಾತ್ರಾ ಗದ್ದುಗೆಗೆ ಆಗಮಿಸಿ ಶ್ರೀಮಾರಿಕಾಂಬಾ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ರಾಜ್ಯದ ಪ್ರಸಿದ್ದ ಶಿರಸಿಯ ಮಾರಿಕಾಂಬಾ ಜಾತ್ರೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.