ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ತಾಲೂಕಿನ ಬುಡಕಟ್ಟು ಕುಣಬಿಗಳ ಮಾಯರೆಯಲ್ಲಿರುವ ಗವಳಾದೇವಿ ಹುತ್ತಿಗೆ ಪಂಚ ಮಿರಾಶಿಗಳಿಂದ ಸೀರೆ ಉಡಿಸುವ ವಾರ್ಷಿಕ ಜಾತ್ರಾ ಮಹೋತ್ಸವ ಮಾ.01ರಂದು ನಡೆಯಲಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಮಾಯರೆಯಲ್ಲಿರುವ ಗವಳಾದೇವಿ ಅತ್ಯಂತ ಪವಿತ್ರವಾದ ಹುತ್ತದ ದೇವತೆಯಾಗಿದ್ದು, ಕುಣಬಿ ಬುಡಕಟ್ಟು ಸಮುದಾಯದವರ ನಂಬಿಕೆಯ ಕೇಂದ್ರವಾಗಿದೆ. ಮಾಯರೆಯಲ್ಲಿ ಸುಮಾರು 25 ಅಡಿ ಎತ್ತರದ ಹುತ್ತದಲ್ಲಿ ದೇವಿಯು ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಪ್ರತಿವರ್ಷ ಪಂಚ ಮಿರಾಶಿಗಳಿಂದ (ಕಣ್ಣೆ, ಮಾಯರೆ, ಸೋಲಿಯೆ, ಬೊಂಡೇಲಿ, ಡಿಗ್ಗಿ) ಸೀರೆ ಉಡಿಸುವ ವಿಶಿಷ್ಟ ಜಾತ್ರಾ ಮಹೋತ್ಸವ ನಡೆಯುತ್ತದೆ.

ಮುಖ್ಯ ಅಂಶಗಳು:

ಸ್ಥಳ:ಮಾಯರೆ ಜೋಯಿಡಾ ತಾಲೂಕು (ಉತ್ತರ ಕನ್ನಡ ಜಿಲ್ಲೆ).

ದೇವತೆ: ಗವಳಾದೇವಿ (25 ಅಡಿ ಎತ್ತರದ ಹುತ್ತ).

ಸಮುದಾಯ: ಕುಣಬಿ ಬುಡಕಟ್ಟು.

ವಿಶೇಷತೆ: ಜಾತ್ರೆಯ ಸಮಯದಲ್ಲಿ ದೇವಿಗೆ ಸೀರೆ ಉಡಿಸುವ ಸಂಪ್ರದಾಯ ಮತ್ತು ಪಂಚ ಮಿರಾಶಿಗಳಿಂದ ಧಾರ್ಮಿಕ ವಿಧಿವಿಧಾನಗಳು.ಈ ಹುತ್ತದ ದೇವಿಯು ಭಕ್ತರ ಕಷ್ಟಗಳನ್ನು ನಿವಾರಿಸುತ್ತಾಳೆ ಮತ್ತು ಬುಡಕಟ್ಟು ಸಂಸ್ಕೃತಿಯ ಸಂಕೇತವಾಗಿದ್ದಾಳೆ. ಇದು ಈ ಭಾಗದ ದೊಡ್ಡ ಜಾತ್ರೆ. ಮಾ.01ರಂದು ಮಧ್ಯಾಹ್ನ 12ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೊಂಡೇಲಿ, ಕಣ್ಣೆ, ಮಾಯರೆ, ಸೋಲಿಯೆ ಹಾಗೂ ಡಿಗ್ಗಿ ಗ್ರಾಮದ ಪಂಚ ಮಿರಾಶಿಗಳು ದೇವಿಗೆ ಪ್ರಿಯವಾದ ಸೀರೆ ಉಡಿಸುತ್ತಾರೆ. ದೇವಿಗೆ ಪಂಚಮಿರಾಶಿಗಳು ಪೂಜೆ ಸಲ್ಲಿಸಿ, ಬಳಿಕ ದೇವಿಗೆ ಸೀರೆ ತೊಡಿಸುವಾಗ ತನ್ನಿಂದ ತಾನಾಗಿ ಗವಳಾದೇವಿ ಸೀರೆಯನ್ನು ಎಳೆದುಕೊಳ್ಳುತ್ತದೆ. ದೇವಿಗೆ ತೊಡಿಸುವ ಸೀರೆಗೆ ಎಲ್ಲಿಯೂ ಗಂಟು ಹಾಕದೇ ಇರುವುದೇ ವಿಶೇಷ. ಭಕ್ತರು ಹರಕೆಯ ರೂಪದಲ್ಲಿ ಸಾವಿರಾರು ಸೀರೆಗಳನ್ನು ದೇವಿಗೆ ತೊಡಿಸುತ್ತಾರೆ. ಸುಮಾರು 30 ಅಡಿಗಿಂತಲೂ ಎತ್ತರದ ಹುತ್ತದಲ್ಲಿ ಗವಳಾದೇವಿ ನೆಲೆ ನಿಂತಿದ್ದಾಳೆ. ದೇವಿಯ ಪೂಜೆಯ ಎಲ್ಲ ಧಾರ್ಮಿಕ, ಸಾಂಪ್ರದಾಯಿಕ ಕಾರ್ಯಗಳನ್ನು ಈ ಹುತ್ತಕ್ಕೆ ಮಾಡಲಾಗುತ್ತದೆ. ಗೋವಾ ಗಡಿಗೆ ಹೊಂದಿಕೊಂಡಿರುವ ತಾಲೂಕಿನ ಗಡಿಗ್ರಾಮ ತಾಲೂಕಿನ ಡಿಗ್ಗಿ ಕಾಳಿನದಿಯ ಉಗಮಸ್ಥಾನ. ಕಾಡಿನ ಮಧ್ಯೆಯ ಮಾಯರೆಯಲ್ಲಿ ಗೋವಾ ಹಾಗೂ ಕರ್ನಾಟಕ ರಾಜ್ಯದ ಭಾವೈಕ್ಯತೆಯ ಸಂಕೇತವಾಗಿ ಗವಳಾದೇವಿ ನೆಲೆ ನಿಂತಿದ್ದಾಳೆ. ಈ ಜಾತ್ರೆಗೆ ಗೋವಾ ರಾಜ್ಯದಿಂದ, ರಾಜ್ಯದ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನಿಂದ ಸಾವಿರಾರು ಭಕ್ತರು ಬರುತ್ತಾರೆ.ಗವಳಾ ದೇವಿ ಗುಡ್ಡದ ಮೇಲೆ ಕಾಡಿನ ಮಧ್ಯೆ ನೆಲೆನಿಂತಿದ್ದಾಳೆ. ದೇವಸ್ಥಾನದ ಪಕ್ಕದಲ್ಲಿರುವ ಕೆರೆ ಬರಗಾಲದಲ್ಲೂ ಬತ್ತುವುದಿಲ್ಲ ಎನ್ನುವುದು ಅಲ್ಲಿನ ಮಿರಾಶಿಗಳ ನಂಬಿಕೆ. ಈ ಕೆರೆಯ ನೀರನ್ನು ದೇವಿಯ ತೀರ್ಥವನ್ನಾಗಿ ಬಳಸಲಾಗುತ್ತದೆ. ಈ ಬೇಸಿಗೆಯಲ್ಲಿ ಕೆರೆಯಲ್ಲಿ ನೀರಿದ್ದು, ಈ ನೀರನ್ನೆ ಭಕ್ತರು ಬಳಸುತ್ತಾರೆ.

ತಾಲೂಕಾ ಕೇಂದ್ರ ಜೊಯಿಡಾದಿಂದ ಸುಮಾರು 45 ಕಿ.ಮೀ. ದೂರವಿರುವ ಡಿಗ್ಗಿಗೆ ಕಾರವಾರ ರಾಮನಗರ ಮಹಾಮಾರ್ಗ ಕಿರವತ್ತಿಯಿಂದ 38 ಕಿ.ಮೀ. ತೇರಾಳಿ, ಶಿಸೈ ಮೂಲಕ ಇಲ್ಲವೇ ಕಾರ್ಟೋಳಿ ಮೂಲಕ ಹೋಗಬೇಕಾಗುತ್ತದೆ. ರಾಮನಗರ ಭಾಗದ ಭಕ್ತರು ಬಜಾರಕುಣಂಗ ಮಾರ್ಗವಾಗಿ ಆಗಮಿಸುತ್ತಾರೆ. ಗೋವಾ ರಾಜ್ಯದ ಭಕ್ತರು ಸಾಂಗ್ಯಾ ತಾಲೂಕಿನ ಜುನಾತ್ ರಸ್ತೆ ಮೂಲಕ ಡಿಗ್ಗಿ ಮುಖಾಂತರ ಗವಳಾ ದೇವಿ ದರ್ಶನ ಪಡೆಯಬಹುದಾಗಿದೆ.