ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಅಸು ಶಾಲೆಯ ರಜತ ಮಹೋತ್ಸವ,ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವ ಸಮಾರಂಭ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಜೋಯಿಡಾ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ,ಜೋಯಿಡಾ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ರಾಮನಗರ,ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅಸು,ತಾಲೂಕು ಜೋಯಿಡಾ, ಶೈಕ್ಷಣಿಕ ಜಿಲ್ಲೆ ಶಿರಸಿ(ಉತ್ತರಕನ್ನಡ),ಎಸ್ ಡಿ ಎಂ ಸಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ ಅಸು ಇವರ ಸಂಯುಕ್ತಾಶ್ರಯದಲ್ಲಿ 9 ಫೆಬ್ರುವರಿ 2026 ರ ಸೋಮವಾರ ಯಶಸ್ವಿಯಾಗಿ ಸಂಪನ್ನಗೊಂಡಿತು. ಕಾರ್ಯಕ್ರಮದ ಆರಂಭದಲ್ಲಿ ಗ್ರಾಮದ ದೇವಸ್ಥಾನದಲ್ಲಿ ಮಿರಾಶಿಯವರು ದೇವರ ಪೂಜಾ ಕಾರ್ಯಕ್ರಮ ನೆರವೇರಿಸಿದರು. ನಂತರ ಅಸು ಶಾಲೆಯ ಪರಿಸರದಲ್ಲಿನ ಆಕರ್ಷಕ ಪೋಷಾಕು,ವಾದ್ಯಗಳ ಜೊತೆಯ ಎತ್ತಿನ ಬಂಡಿಯ ಮೆರವಣಿಗೆಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಶಾಲೆಯ ವಿದ್ಯಾರ್ಥಿಗಳು,ಶಿಕ್ಷಕ ವೃಂದದವರು,ಎಸ್ ಡಿ ಎಂ ಸಿ ಪದಾಧಿಕಾರಿಗಳು,ಪಾಲಕರು,ಪೋಷಕರು,ಹಳೆಯ ವಿದ್ಯಾರ್ಥಿಗಳು,ತಾಲೂಕಾ ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗದವರು ಭಾಗವಹಿಸಿದ್ದರು. ವೇದಿಕೆಯ ಕಾರ್ಯಕ್ರಮದ ಆರಂಭದಲ್ಲಿ ಮೂರ್ತಿ ಪೂಜೆ,ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ಸ್ವಾಗತ ನೃತ್ಯ,ಸುಶ್ರಾವ್ಯವಾದ ಪ್ರಾರ್ಥನೆ ನಡೆಯಿತು. ಅಸು ಶಾಲೆಯ ಮುಖ್ಯೋಪಾಧ್ಯಾಯರಾದ ಸಂಗೀತಾ ವಿಷ್ಣು ಲಾಂಜೇಕರ ಇವರು ವೇದಿಕೆಯ ಗಣ್ಯರನ್ನು ವಿದ್ಯಾರ್ಥಿಗಳಿಂದ ಪುಷ್ಪ ನೀಡುವ ಮೂಲಕ ಸ್ವಾಗತಿಸಿ,ತಮ್ಮ ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಸು ಗ್ರಾಮ ಪಂಚಾಯತ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಚಾಂಬಾರರವರು ಉಪಸ್ಥಿತರಿದ್ದ ಗಣ್ಯರೊಂದಿಗೆ ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅಸು ಶಾಲೆಯ ಮುಖ್ಯೋಪಾಧ್ಯಾಯರಾದ ಸಂಗೀತಾ ಲಾಂಜೇಕರರವರು 2000-2001 ನೇ ಶೈಕ್ಷಣಿಕ ವರ್ಷದಲ್ಲಿ ಸ್ಥಾಪಿತವಾದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅಸು.ಈ ವರ್ಷ ೨೫ ವರ್ಷಗಳ ಯಶಸ್ವಿ ಶೈಕ್ಷಣಿಕ ಪಯಣವನ್ನು ಪೂರೈಸಿದೆ.ಈ ೨೫ ವರ್ಷಗಳ ಶಾಲಾ ಸಂಭ್ರಮ ಕಾರ್ಯಕ್ರಮದ ಮುಖ್ಯ ಉದ್ದೇಶವು ಶಾಲೆಯ ಸ್ಥಾಪನೆಯಿಂದ ಇಂದಿನವರೆಗಿನ ಶೈಕ್ಷಣಿಕ ಸಾಧನೆಗಳು, ಮೌಲ್ಯಧಾರಿತ ಶಿಕ್ಷಣ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವುದಾಗಿದೆ.ಈ ಕಾರ್ಯಕ್ರಮದ ಮೂಲಕ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳ ಶ್ರಮವನ್ನು ಗೌರವಿಸಿ ಮುಂದಿನ ಶೈಕ್ಷಣಿಕ ಗುರಿಗಳಿಗೆ ಪ್ರೇರಣೆಯನ್ನು ನೀಡಲಾಗುತ್ತದೆ.ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅಸು ನಡೆದು ಬಂದ ದಾರಿಯ ಸರಳ ಆರಂಭದಿಂದ ಗುಣಮಟ್ಟದ ಶಿಕ್ಷಣದತ್ತ ನಿರಂತರ ಪ್ರಯತ್ನಗಳ ಕಥೆಯಾಗಿದೆ.ಸೀಮಿತ ಸೌಲಭ್ಯಗಳಿಂದ ಆರಂಭವಾದ ಈ ಶಿಕ್ಷಣ ಸಂಸ್ಥೆ ಇಂದು ಉತ್ತಮ ಶೈಕ್ಷಣಿಕ ಫಲಿತಾಂಶಗಳು, ಶಿಸ್ತು,ಸಂಸ್ಕಾರ ಮತ್ತು ಸಹಪಠ್ಯ ಚಟುವಟಿಕೆಗಳ ಮೂಲಕ ವಿಶಿಷ್ಟ ಸ್ಥಾನ ಪಡೆದಿದೆ.ಈ ೨೫ ವರ್ಷಗಳ ಪಯಣವು ಶ್ರಮ,ತ್ಯಾಗ ಮತ್ತು ಸಮಪರ್ಣೆಯ ಪ್ರತೀಕವಾಗಿದ್ದು ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳತ್ತ ನಮ್ಮಶಾಲೆಯನ್ನು ಮುನ್ನಡೆಸುವ ಪ್ರೇರಣೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿಗಳಾದ ಎಮ್ ಎಸ್ ಹೆಗಡೆ ನಿವೃತ್ತ ಪ್ರಾಂಶುಪಾಲರು,ಡಯಟ್ ಶಿರಸಿ ಇವರು ಮಾತನಾಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಹೆಚ್ಚಿನ ಕಾಲ ಸೇವೆ ಸಲ್ಲಿಸಿದ ಜೋಯಿಡಾ ತಾಲೂಕಿನ ಅಸು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ರಜತಮಹೋತ್ಸವ,ಪ್ರತಿಭಾ ಪುರಸ್ಕಾರ,ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅತಿಯಾದ ಸಂತೋಷವಾಗುತ್ತಿದೆ.ತಾಲೂಕಿನ ಬಹುತೇಕ ಶೈಕ್ಷಣಿಕ ಕಾರ್ಯಕ್ರಮಗಳೆಂದರೆ ತುಂಬಾ ವಿಶಿಷ್ಟ,ವೈವಿಧ್ಯಮಯವಾಗಿರುತ್ತದೆ.ಇಲ್ಲಿನ ಪ್ರತಿಯೊಂದು ಕಾರ್ಯಕ್ರಮವು ಆಯಾ ಊರಿನಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ.ಇಲ್ಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಇಲಾಖೆಯ ಹಾಗೂ ಸಮುದಾಯದ ಸಹಭಾಗಿತ್ವ ಕಾಣಬಹುದಾಗಿದೆ.ನನ್ನ ಶೈಕ್ಷಣಿಕ ಸೇವೆಯ ವೃತ್ತಿ ಜೀವನದಲ್ಲಿ ತಾಲೂಕಿನ ಜನತೆ,ಇಲ್ಲಿನ ಶಿಕ್ಷಕ ವೃಂದದವರು ವ್ಯಕ್ತಪಡಿಸಿದ ಪ್ರೀತಿ, ವಿಶ್ವಾಸ, ಪ್ರೋತ್ಸಾಹ,ಸಹಕಾರ ಎಂದಿಗೂ ಮರೆಯುವಂತಿಲ್ಲ. ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಸಂಘಟಕರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾರುತಿ ಶಂಕರ ಪಾಟೀಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು,ಸಮಾಜ ಸೇವಕರು ಮಾತನಾಡಿ ನಮ್ಮ ಪಂಚಾಯತ ವ್ಯಾಪ್ತಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಅಸು ಶಾಲೆಯು ರಜತಮಹೋತ್ಸವ ಆಚರಿಸುತ್ತಿರುವುದು ಖುಷಿಯ ವಿಚಾರ.ನಮ್ಮ ಸರ್ಕಾರವು, ಶಾಸಕರು,ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಶೈಕ್ಷಣಿಕ ವಿಭಾಗದಲ್ಲಿನ ಎಲ್ಲಾ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿ ತನ್ಮೂಲಕ ಶಾಲೆಯ, ಊರಿನ, ಶಿಕ್ಷಕ ವೃಂದದವರ, ಪಾಲಕರ ಕೀರ್ತಿಯನ್ನು ಹೆಚ್ಚಿಸಿ ಎಂದು ಹೇಳಿದರು. ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಯಶವಂತ ನಾಯ್ಕ ಮಾತನಾಡಿ ನಮ್ಮ ತಾಲೂಕಿನ ವ್ಯಾಪ್ತಿಯ ಅಸು ಶಾಲೆಯು ರಜತಮಹೋತ್ಸವ ಆಚರಿಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ.ಈ ಒಂದು ಸುಂದರ ಸಮಾರಂಭವನ್ನು ಆಯೋಜಿಸಿರುವ ಇಲ್ಲಿನ ಶಿಕ್ಷಕ ವೃಂದದವರ ಹಾಗೂ ಸಮುದಾಯ ಸಹಕಾರ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನುವಹಿಸಿದ್ದ ಮಾರುತಿ ಬಾಳಪ್ಪ ಸುತಾರ ಅಸು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು,ವಿಜಯ ಪುರುಷೋತ್ತಮ ಪಂಡಿತ ಮಾಜಿ ತಾಲೂಕು ಪಂಚಾಯತ ಉಪಾಧ್ಯಕ್ಷರು ಜೋಯಿಡಾ, ರಾಮಚಂದ್ರ ಕುಷ್ಟ ಮಾಜಾಳಕರ ಉಪಾಧ್ಯಕ್ಷರು ಗ್ರಾಮ ಪಂಚಾಯತ ಅಸು,ಪರಮೇಶ್ವರ ಹರಿಕಾಂತ ತಾಲೂಕಾ ಶಿಕ್ಷಣ ಸಂಯೋಜಕರು,ವೆಂಕಟೇಶ ಕುಲಕರ್ಣಿ ಅಸು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು,ಪ್ರಶಾಂತ ನಾಯ್ಕ ಮುಖ್ಯೋಪಾಧ್ಯಾಯರು ಸರಕಾರಿ ಪ್ರೌಢಶಾಲೆ ಅಸು, ಬಿ ಹೆಚ್ ಭಾಗವಾನ ಸಮೂಹ ಸಂಪನ್ಮೂಲ ವ್ಯಕ್ತಿ ಸಮೂಹ ಸಂಪನ್ಮೂಲ ಕೇಂದ್ರ ರಾಮನಗರ,ಸ್ನೇಹಾ ನಾಮದೇವ ಚಾಂಬಾರ ಉಪಾಧ್ಯಕ್ಷರು ಅಸು ಶಾಲೆಯ ಎಸ್ ಡಿ ಎಂ ಸಿ,ಇನ್ನಿತರ ಗಣ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯ ಮೇಲಿನ ಗಣ್ಯರಿಂದ ಶಿಕ್ಷಕ ವೃಂದದವರಿಗೆ,ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ಶಾಲೆಯ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿಗಳು,ಗ್ರಾಮದ ಪ್ರತಿಭೆಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಸಹ ಶಿಕ್ಷಕರಾದ ಮುರುಘರಾಜೇಂದ್ರಗೌಡ ಪಾಟೀಲ ಅತ್ಯುತ್ತಮವಾಗಿ ನಿರ್ವಹಿಸಿದರು.ವಂದನಾರ್ಪಣೆ ಕಾರ್ಯಕ್ರಮವನ್ನು ಶಾಲೆಯ ಸಹ ಶಿಕ್ಷಕಿಯಾದ ಸುಮನಾ ಭಂಡಾರಿ ನಡೆಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ,ವಿವಿಧ ಶಾಲೆಯ ಶಿಕ್ಷಕ ವೃಂದದವರಿಗೆ, ಮಕ್ಕಳಿಗೆ,ಅಸು ಶಾಲೆಯ ಶಿಕ್ಷಕ ವೃಂದದವರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು,ಉಪಾಧ್ಯಕ್ಷರು,ಸರ್ವ ಸದಸ್ಯರ,ಪಾಲಕರ,ಪೋಷಕರ,ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ಸಹಕಾರದಲ್ಲಿ ಅತ್ಯುತ್ತಮ ಶುಚಿ-ರುಚಿಯಾದ ಉಪಹಾರ,ಭೋಜನದ ವ್ಯವಸ್ಥೆಯನ್ನು ಮಾಡಿದ್ದರು. ಸಂಜೆಯ ವೇಳೆ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ,ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ತಡರಾತ್ರಿಯವರೆಗೂ ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.