ಸುದ್ದಿ ಕನ್ನಡ ವಾರ್ತೆ
ಕಾರವಾರ:ನಗರದ ಶಿರವಾಡ ನಗರಸಭೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸಲು ಹರಸಾಹಸಪಟ್ಟರು. ಸಂಗ್ರಹಗೊಂಡಿದ್ದ ಪ್ಲಾಸ್ಟಿಕ್ ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡಿದ್ದು ದೊಡ್ಡ ಪ್ರಮಾಣದಲ್ಲಿ ಬೆಂಕಿ ಪಸರಿಸಿದ್ದು ಸುತ್ತಮುತ್ತಲೂ ಮನೆಗಳಿದ್ದು ಜನ ಭಯದಲ್ಲಿ ಇರುವಂತೆ ಮಾಡಿತ್ತು.ಬೆಂಕಿಯ ಮಾಹಿತಿ ಲಭಿಸಿದ ತಕ್ಷಣ ಕಾರವಾರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಹೆಚ್ಚುವರಿಯಾಗಿ ಅಂಕೋಲಾದ ಅಗ್ನಿಶಾಮಕ ವಾಹನ ಹಾಗೂ ಗ್ರಾಸಿಂ ಇಂಡಸ್ಟ್ರೀಸ್ನ ಅಗ್ನಿಶಾಮಕ ವಾಹನಗಳ ಸಹಾಯವನ್ನು ಪಡೆಯಲಾಯಿತು.
ಹಲವಾರು ಗಂಟೆಗಳ ನಿರಂತರ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಘಟನಾ ಸ್ಥಳದಲ್ಲಿ ನಗರಸಭೆಯ ಅಧಿಕಾರಿಗಳು ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ತ್ಯಾಜ್ಯ ವಿಲೇವಾರಿ ಘಟಕದ ಸುತ್ತಮುತ್ತ ಜನವಸತಿ ಪ್ರದೇಶ ಇರುವುದರಿಂದ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
