ಸುದ್ದಿ ಕನ್ನಡ ವಾರ್ತೆ

ಅಂಕೋಲಾ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಸುಂಕಸಾಳ ಶಾಖೆಯಲ್ಲಿ ದರೋಡೆಗೆ ವಿಫಲ ಯತ್ನ ನಡೆದಿದೆ.

ರಾತ್ರಿ ಬ್ಯಾಂಕ್ ಹಿಂಭಾಗದಲ್ಲಿರುವ ಶೌಚಾಲಯದ ಗೋಡೆಯನ್ನು ಕೊರೆದು ಒಳ ಪ್ರವೇಶಿಸಲು ಕಳ್ಳರು ಯತ್ನಿಸಿದ್ದಾರೆ. ನಂತರ ಬ್ಯಾಂಕ್‌ನ ಸ್ಟ್ರಾಂಗ್‌ ರೂಮ್ ಗೋಡೆಯನ್ನು ಒಡೆಯಲು ಪ್ರಯತ್ನಿಸಿದ ಗುರುತುಗಳು ಪತ್ತೆಯಾಗಿವೆ. ಆದರೆ ಯಾವುದೇ ಹಣ ಅಥವಾ ವಸ್ತುಗಳ ಕಳ್ಳತನವಾಗಿಲ್ಲ ಎಂದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ.

ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿದ ತಕ್ಷಣ ಅಂಕೋಲಾ ಸಿಪಿಐ ಚಂದ್ರಶೇಖರ ಮಠಪತಿ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾಂಕ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.ಸ್ಥಳದಲ್ಲಿ 15 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.