ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಹರಹರ ಮಹಾದೇವ,ಓಂ ನಮಃ ಶಿವಾಯ, ಎಂಬ ಘೋಷಣೆಯೊಂದಿಗೆ ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ ವರ್ಷಕ್ಕೊಮ್ಮೆ ಮಹಾಶಿವರಾತ್ರಿಯ ದಿನದಂದು ಮಾತ್ರ ದರ್ಶನ ಭಾಗ್ಯ ನೀಡು ಕವಳೇಶ್ವರ ಹಾಗೂ ಪರಿವಾರ ದೇವತೆಗಳ ದರ್ಶನಕ್ಕೆ ರವಿವಾರ ಮಹಾಶಿವರಾತ್ರಿಯ ದಿನದಂದು ಭಕ್ತ ಸಮೂಹ ಹರಿದು ಬಂದಿತು. ದಾಂಡೇಲಿ- ಅಂಬಿಕಾನಗರ ಹಾಗೂ ಪಣಸೋಲಿ ಮಾರ್ಗವಾಗಿ ಸಾರಿಗೆ ವಾಹನ,ಖಾಸಗಿ ವಾಹನಗಳಲ್ಲಿ ವಾಹನಗಳು ಹೋಗುವ ಸ್ಥಳದವರೆಗೆ ಬಂದು,ನಂತರ ಅಲ್ಲಿಂದ ದಟ್ಟ ಕಾನನದಲ್ಲಿರುವ ಬೆಟ್ಟ ಗುಡ್ಡ,ಕಡಿದಾದ ಕಾಡು ದಾರಿಯ ನಡುವೆ ದೇವರ ನಾಮವನ್ನು ಸ್ಮರಿಸುತ್ತಾ,ಮೆಟ್ಟಿಲುಗಳನ್ನು ಏರಿ ಸರತಿಯ ಸಾಲಿನಲ್ಲಿ ನಿಂತು ಶ್ರೀ ದೇವರ ಸನ್ನಿಧಿಗೆ ತಂದ ಹೂವು,ಹಣ್ಣು,ಬಿಲ್ವಪತ್ರೆ, ಕಾಯಿಗಳನ್ನು ಸಮರ್ಪಿಸಿ,ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ರವಿವಾರ ನಸುಕಿನಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವರ ದರ್ಶನ ಭಾಗ್ಯ ಪಡೆದು ಪುನೀತರಾದರು. ಕವಳೇಶ್ವರ ಸನ್ನಿಧಾನಕ್ಕೆ ಜೋಯಿಡಾ,ದಾಂಡೇಲಿ ತಾಲೂಕಿನ ಭಕ್ತರಲ್ಲದೇ, ಜಿಲ್ಲೆಯ,ಬೇರೆ ಜಿಲ್ಲೆಯ,ರಾಜ್ಯದ ಭಕ್ತರು ಕುಡಿಯುವ ನೀರು ಸೇರಿದಂತೆ ತಮ್ಮ ಅಗತ್ಯ ವಸ್ತುಗಳೊಂದಿಗೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಕಾಡಿನ ದಾರಿಯಲ್ಲಿ ಸಾಗುವ ಭಕ್ತರಿಗೆ ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ಆಯಾಸ,ದಾಹ ತಣಿಸಲು,ಬೆಲ್ಲ,ಮಜ್ಜಿಗೆ,ಪಾನೀಯ
ನೀರಿನ ವ್ಯವಸ್ಥೆಯನ್ನು ವಿವಿಧ ಸೇವಾ ಸಂಸ್ಥೆಯ ಸ್ವಯಂ ಸೇವಕರ ತಂಡದವರು ಮಾಡಿದ್ದು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಸಾರಿಗೆ ಸಂಸ್ಥೆಯ ಇಲಾಖೆ ಯವರು ಕೂಡ ಪ್ರತಿ ವರ್ಷದಂತೆ ಕವಳೇಶ್ವರನ ಜಾತ್ರೆಯ ನಿಮಿತ್ತ ಅಗತ್ಯ ಸಾರಿಗೆ ಬಸ್ ನ ಒದಗಿಸಿ ಶ್ರೀ ದೇವರ ದರ್ಶನ ಭಾಗ್ಯ ಪಡೆಯಲು ಸಹಕಾರ ನೀಡಿದರು. ವಿಶೇಷವಾಗಿ ಜೋಯಿಡಾ-ದಾಂಡೇಲಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು,ಜಾತ್ರೆಯ ಪೂರ್ವ ಸಿದ್ಧತೆ,ಸ್ವಚ್ಛತೆ,ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಸೇವೆ,ಭಕ್ತರಿಗೆ ದಾರಿಯ ಮಧ್ಯದಲ್ಲಿ ಮಾರ್ಗದರ್ಶನ, ಸಹಕಾರದ ಜೊತೆಗೆ ದಾಂಡೇಲಿಯ ಆರಕ್ಷಕ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜೋಯಿಡಾ ಹಾಗೂ ದಾಂಡೇಲಿಯ ಅಧಿಕಾರಿ, ಸಿಬ್ಬಂದಿ ವರ್ಗದವರು ಅಗತ್ಯ ಬಂದೋಬಸ್ತ ಕಲ್ಪಿಸಿ ಸುಗಮ ಜಾತ್ರೆಗೆ ಸಹಕಾರ ನೀಡಿದರು.
