ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಇಡಗುಂದಿ ಶ್ರೀ
ರಾಮಲಿಂಗ ದೇವಸ್ಥಾನದ ಮಹಾಶಿವರಾತ್ರಿ ಜಾತ್ರಾಮಹೋತ್ಸವ ಫೆ. 15 ಮತ್ತು 16ರಂದು ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರನು ಸೀತಾ ಲಕ್ಷಣರೊಂದಿಗೆ ವನವಾಸಕ್ಕೆ ಬಂದಾಗ ಇಡಗುಂದಿಗೆ ಬಂದಿದ್ದ. ಇಲ್ಲಿ ಭಕ್ತಜನೋದ್ಧಾರಕ್ಕಾಗಿ ಈ ಶಿವಲಿಂಗವನ್ನು ಸ್ಥಾಪಿಸಿ, ಪೂಜಿಸಿದನೆಂದು ಐತಿಹ್ಯವಿದೆ. ಆ ಕಾರಣಕ್ಕಾಗಿ ಇಡಗುಂದಿಯ ರಾಮಲಿಂಗ ಎಂಬ ಪ್ರಸಿದ್ದಿ ಬಂದಿದೆ.
ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾತ್ರಾ
ಮಹೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಜಾತ್ರೆಯ ಸಂದರ್ಭದಲ್ಲಿ ಎಳೆಯಲಾಗುವ ಎರಡು ರಥಗಳನ್ನು ಕಟ್ಟಲಾಗುತ್ತಿದೆ. ದೊಡ್ಡ ರಥವನ್ನು ಹಗ್ಗ, ಕಂಬ, ಮಿಳೆ ಹಾಕಿ ಜೋಡಿಸಿದ್ದರೆ ಸಣ್ಣ ರಥವನ್ನು ಕಬ್ಬಿಣದ ಸಾಮಗ್ರಿಗಳನ್ನು ಬಳಸಿ ಸಿದ್ಧಪಡಿಸಲಾಗುತ್ತಿದೆ.

ಫೆ. 15 ಮಹಾಶಿವರಾತ್ರಿಯಂದು ಶಿವಯೋಗ, ಶಿಬಿಕಾರೋಹಣ, ಯಂತ್ರೋತ್ಸವ, ರಾತ್ರಿ ಸಣ್ಣ ರಥೋತ್ಸವ, ಫೆ. 16ರಂದು ಬೆಳಗ್ಗೆ ಮಹಾರಥೋತ್ಸವ, ಸಂಜೆ ಚೂರ್ಣೋತ್ಸವ, ಅವಭ್ರತ ತೀರ್ಥಸ್ನಾನ, ದೀಪೋತ್ಸವ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.